ಭಾನುವಾರ, ಸೆಪ್ಟೆಂಬರ್ 19, 2021
24 °C
ಮಂಟಪಗಳು ಸಜ್ಜು, ವಿಘ್ನ ನಿವಾರಕನ ಸ್ವಾಗತಕ್ಕೆ ತಯಾರಿ

ಬೆಳಗಾವಿ: ನಿರ್ಬಂಧದ ಕರಿನೆರಳಲ್ಲಿ ಗಣೇಶೋತ್ಸವ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ಗಣೇಶೋತ್ಸವಕ್ಕೆ ಈ ಬಾರಿ ರಂಗು ಬಂದಿದೆ.

ಸಾಂಪ್ರದಾಯಿಕ ಉತ್ಸವಕ್ಕೆ ಎಲ್ಲೆಡೆ ಭಕ್ತರು ಸಿದ್ಧತೆಗಳನ್ನು ನಡೆಸಿದ್ದು, ವಿಘ್ನ ನಿವಾರಕ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಮಂಟಪಗಳು ಅಲಂಕಾರಗೊಂಡಿವೆ.

ಸಾರ್ವಜನಿಕ ಗಣೇಶೋತ್ಸವ ಸರ್ಕಾರದಿಂದ ಅನುಮತಿ ದೊರೆತಿರುವುದರಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಸೀಮಿತ ಅವಕಾಶದಲ್ಲೇ ಅದ್ಧೂರಿಯಾಗಿ ನಡೆಸಲು ಸಾರ್ವಜನಿಕ ಗಣೇಶ ಮಹಾಮಂಡಳಗಳು ತಯಾರಿ ನಡೆಸಿವೆ. ಇದರಿಂದ, ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಮೂರ್ತಿಕಾರರಿಗೆ ನೆರವಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜಿಲ್ಲೆಯಲ್ಲೂ ಪ್ರಕರಣಗಳು ಶೂನ್ಯಕ್ಕೆ ಇಳಿದಿಲ್ಲ. ಈ ನಡುವೆಯೇ ಸರ್ಕಾರವು ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ನೂರಾರು ಮಂದಿ ಸೇರುವುದರಿಂದ ಮಾರ್ಗಸೂಚಿ ಅನುಸರಿಸುವುದು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿದೆ.

ಪಾಲನೆಯೇ ಸವಾಲು:

ಒಂದೆಡೆ ಧಾರ್ಮಿಕ ಭಾವನೆಗಳನ್ನೂ ಗೌರವಿಸುತ್ತಾ, ಮತ್ತೊಂದೆಡೆ ನಿಯಮಗಳ ಪಾಲನೆ ಆಗುವಂತೆಯೂ ನೋಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಜನಸಂದಣಿ ಹೆಚ್ಚಿದರೆ, ಮಾಸ್ಕ್‌ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ಕೊರೊನಾ ಹರಡುವ ಭೀತಿಯೂ ಕಾಡುತ್ತಿದೆ.

ಈ ಬಾರಿಯೂ 370ಕ್ಕೂ ಹೆಚ್ಚು ಮಂಟಪ (ಪೆಂಡಾಲ್)ಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮಂಡಳಗಳು ಸಜ್ಜಾಗಿವೆ. ವೈವಿಧ್ಯ ಮಂಟಪಗಳ ನಿರ್ಮಾಣ ಮತ್ತು ವಿದ್ಯುತ್‌ ದೀಪಾಲಂಕಾರಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಪದಾಧಿಕಾರಿಗಳು ಮಾಡಿಕೊಳ್ಳುತ್ತಿರುವುದು ಗುರುವಾರ ಕಂಡುಬಂತು.

ಗಡಿ ನಾಡಿನಲ್ಲಿ ಗಣೇಶ ಚತುರ್ಥಿ ಅಂಗವಾಗಿ ನಡೆಯುವ ಉತ್ಸವವು ವರ್ಷದಿಂದ ವರ್ಷಕ್ಕೆ ವೈಭವ ಪಡೆದುಕೊಳ್ಳುತ್ತಲೇ ಬಂದಿದೆ. ಈ ಕಾರಣದಿಂದಾಗಿಯೇ ಇಡೀ ರಾಜ್ಯದ ಗಮನವನ್ನೂ ಸೆಳೆಯುತ್ತಾ ಬಂದಿದೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ನಿರ್ಬಂಧ ವಿಧಿಸಿದ್ದರಿಂದಾಗಿ ಉತ್ಸವವು ಎರಡು ವರ್ಷಗಳು ಸಂಪೂರ್ಣ ಮಂಕಾಗಿತ್ತು. ಈ ಬಾರಿ ಸಂಭ್ರಮದಿಂದ ಆಚರಿಸಬೇಕು ಎನ್ನುವುದು ಮಹಾಮಂಡಳಗಳ ಆಕಾಂಕ್ಷೆಯಾಗಿದ್ದು, ಅದಕ್ಕೆ ತಕ್ಕಂತೆ ಸಜ್ಜಾಗಿವೆ. ಗಣೇಶ ಮೂರ್ತಿಗಳನ್ನು ಶುಕ್ರವಾರ ಪ್ರತಿಷ್ಠಾಪಿಸಲಾಗುತ್ತದೆ.

ಇತಿಹಾಸವಿದೆ:

ಗಣೇಶ ಮೂರ್ತಿಗಳನ್ನು, ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತಿಷ್ಠಾಪಿಸುತ್ತಿರುವ ಖ್ಯಾತಿ ಇಲ್ಲಿನ ಕೆಲವು ಮಂಡಳಗಳಿಗಿದೆ. ಕನ್ನಡ ಹಾಗೂ ಮರಾಠಿ ಭಾಷಿಕರು ಕೂಡಿ ಆಯೋಜಿಸುವುದು ವಿಶೇಷ. ಹಲವು ಭಾಷೆ, ಸಂಸ್ಕೃತಿಗಳ ಜನರು ವಾಸಿಸುತ್ತಿರುವ ಇಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನದ ಭಾಗವಾಗಿ ಈ ಉತ್ಸವವನ್ನು ಹಿಂದಿನಿಂದಲೂ ಬಳಸಿಕೊಳ್ಳಲಾಗುತ್ತಿದೆ.

ರವಿವಾರ ಪೇಟೆ, ಬಾತಕಾಂಡೆ ಗಲ್ಲಿ, ಮಾರುತಿ ಗಲ್ಲಿ, ಜೇಂಡಾ ಚೌಕ, ಕಾಮತ್‌ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಗಳು ಶತಮಾನೋತ್ಸವ ಆಚರಿಸಿವೆ. ಚಿತ್ತಾಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಮನಸೆಳೆಯುತ್ತಿವೆ. ಅಲ್ಲಲ್ಲಿ ಪ್ರಮುಖ ವೃತ್ತಗಳು, ರಸ್ತೆಗಳ ಬದಿಯಲ್ಲೂ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಬಹುತೇಕ ಬಡಾವಣೆಗಳಲ್ಲಿ ಸಂಘ–ಸಂಸ್ಥೆಗಳಿಂದ ಉತ್ಸವ ನಡೆಸಲಾಗುತ್ತದೆ. ಶಾಲಾ–ಕಾಲೇಜುಗಳ ಆವರಣದಲ್ಲೂ ಆಯಾ ಆಡಳಿತ ಮಂಡಳಿಗಳ ವತಿಯಿಂದ ಗಣಪನನ್ನು ಆರಾಧಿಸಲಾಗುತ್ತದೆ.

ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಮೆರವಣಿಗೆ ನಡೆಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಪೂಜೆ ಕಾಲಕ್ಕೆ ಕೇವಲ 20 ಮಂದಿಯಷ್ಟೆ ಸೇರಬೇಕು ಎಂದು ಷರತ್ತು ಹಾಕಲಾಗಿದೆ.

ವಿವಿಧ ಶಿಬಿರ

ಈ ಬಾರಿಯ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಅನ್ನ ಪ್ರಸಾದ ವಿತರಣೆ ಇರುವುದಿಲ್ಲ. ಅಲ್ಲಲ್ಲಿ ಕೆಲವರು ರಕ್ತದಾನ ಶಿಬಿರ, ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.

–ವಿಕಾಸ ಕಲಘಟಗಿ, ಮುಖಂಡ, ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.