ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ: ನೋಂದಣಿ 5,216, ಆಯ್ಕೆ 509!

ಕೌಶಲ ಕೊರತೆ ಗುರುತಿಸಿದ ಕಂಪನಿಗಳು
Last Updated 3 ಮಾರ್ಚ್ 2022, 7:42 IST
ಅಕ್ಷರ ಗಾತ್ರ

ಬೆಳಗಾವಿ: ನೋಂದಣಿ ಸಾವಿರಾರು. ಆಯ್ಕೆಯಾದವರು ಕೇವಲ ಐದು ನೂರು.

– ‘ಬೆಳಗಾವಿ ಉದ್ಯೋಗ ಮೇಳ’ದ ಫಲಿತಾಂಶವಿದು.

ರಾಜ್ಯ ಸರ್ಕಾರದ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ರೂಪಿಸಿರುವ ‘ಸರ್ವರಿಗೂ ಉದ್ಯೋಗ’ ಕಾರ್ಯಕ್ರಮದಲ್ಲಿ ನಗರದ ಉದ್ಯಮಬಾಗ್‌ನ ಜಿಐಟಿಯಲ್ಲಿ ಡಿ.23 ಮತ್ತು 24ರಂದು ಆಯೋಜಿಸಿದ್ದ ಮೇಳದಲ್ಲಿ ಬಹಳಷ್ಟು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಯುವಜನರು ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಸಫಲವಾಗಿಲ್ಲದಿರುವುದು ಕಂಡುಬಂದಿದೆ.

ಬಿ.ಇ, ಬಿ.ಟೆಕ್., ಎಂ.ಟೆಕ್, ಎಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಐಟಿಐ ಮಾಡಿದವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿತ್ತು. ಬರೋಬ್ಬರಿ 82 ಖಾಸಗಿ ಕಂಪನಿಗಳು ಭಾಗವಹಿಸಿದ್ದವು. ವಿವಿಧ ಉದ್ಯೋಗದ ಆಫರ್‌ಗಳನ್ನು ನೀಡಿದವು. ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ನಿರೀಕ್ಷಿಸಿದಷ್ಟು ಇರಲಿಲ್ಲ:

5,216 ಮಂದಿ ನೋದಾಯಿಸಿದ್ದರು. ಅವರಲ್ಲಿ 651 ಮಂದಿಯನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. 509 ಮಂದಿ ವಿವಿಧ ಕಂಪನಿಗಳ ನೌಕರಿಗೆ ಆಯ್ಕೆಯಾಗಿದ್ದಾರೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪನಿಗಳು ವಿವಿಧ ಕೌಶಲಗಳನ್ನು ಬಯಸುತ್ತಿವೆ. ಸಂವಹನಾ ಕಲೆಯೂ ಇರಬೇಕು ಎಂದು ನಿರೀಕ್ಷಿಸುತ್ತಿವೆ. ಆದರೆ, ನೋಂದಾಯಿಸಿದ್ದ ಬಹುತೇಕ ಮಂದಿಯಲ್ಲಿ ಕಂಪನಿಗಳು ನಿರೀಕ್ಷಿಸುವ ಪ್ರತಿಭೆ ಇರಲಿಲ್ಲ ಎನ್ನುವುದು ಸಾಬೀತಾಗಿದೆ.

118 ಮಂದಿಗೆ ಕೂಡಲೇ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಕಂಪನಿಗಳು ಕೇಳಿದ್ದವು. ಆದರೆ, ಅವರು ಅಂತಿಮ ಸೆಮಿಸ್ಟರ್‌ನಲ್ಲಿ ಇರುವುದರಿಂದಾಗಿ ಅವರು ಕೆಲಸಕ್ಕೆ ಸೇರಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕೆಲವರು ಇಲ್ಲಿಯೇ ಕೆಲಸ ಬಯಸಿದ್ದಾರೆ. ಬೇರೆ ಕಡೆಗೆ ಹೋಗುವುದಕ್ಕೆ ಮನಸ್ಸು ಮಾಡಿಲ್ಲ. ತಾಂತ್ರಿಕವಾಗಿ ಶಕ್ತವಾಗಿಲ್ಲದಿರುವುದು ಹಾಗೂ ಬೇಸಿಕ್‌ ವಿಷಯಗಳಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿಲ್ಲದಿರುವುದನ್ನು ಮತ್ತು ಅವಕಾಶವಿದ್ದರೂ ಬಳಸಿಕೊಳ್ಳಲು ಸಾಧ್ಯವಾಗದಿರುವುದನ್ನು ಗುರುತಿಸಲಾಗಿದೆ.

ತಿರಸ್ಕೃತಗೊಳ್ಳಲು ಕಾರಣಗಳು:

ತಮಗೆ ತಿಳಿದಿರುವುದನ್ನು ಸಮರ್ಥವಾಗಿ ಸಂವಹನ ಮಾಡುವಲ್ಲಿ ಬಹುತೇಕರು ವಿಫಲವಾಗಿದ್ದಾರೆ. ಕಳಪೆ ಸಂವಹನ ಕೌಶಲ, ಆತ್ಮವಿಶ್ವಾಸದ ಕೊರತೆ ಹಾಗೂ ನಡವಳಿಕೆಯಲ್ಲಿ ಸುಧಾರಣೆ ಕಾಣಬೇಕಿರುವುದು, ಕಳಪೆ ಇಂಗ್ಲಿಷ್‌ ಮೊದಲಾದ ಕಾರಣಗಳಿಂದ ಬಹುತೇಕರು ತಿರಸ್ಕೃತವಾಗಿದ್ದಾರೆ. ಕೆಲವರು ಮಹತ್ವಾಕಾಂಕ್ಷಿಗಳಾಗಿದ್ದು, ಕೆಲಸದ ಆಫರ್‌ ಸಿಕ್ಕರೂ ಹೆಚ್ಚಿನ ಸಂಬಳ ಮತ್ತು ಹುದ್ದೆ ಸಿಗದಿರುವುದು ಮೊದಲಾದ ಕಾರಣಗಳಿಂದ ಸಮ್ಮತಿ ನೀಡಿಲ್ಲ ಎನ್ನುವುದನ್ನು ಗುರುತಿಸಲಾಗಿದೆ ಎಂದು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕೋವಿಡ್ ಸಂಕಷ್ಟದ ನಡುವೆಯೂ, ನಿರುದ್ಯೋಗಿಗಳಿಗೆ ಅನುಕೂಲವಾಗಲೆಂದು ಉದ್ಯೋಗ ಮೇಳವನ್ನು ನಡೆಸಲಾಗಿತ್ತು. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. 509 ಮಂದಿಯಷ್ಟೆ ಆಯ್ಕೆಯಾಗಿದ್ದಾರೆ. ಬಹುತೇಕರಿಗೆ ಕೌಶಲದ ಕೊರತೆ ಇರುವುದನ್ನು ಆಯಾ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದವರು ಗುರುತಿಸಿದ್ದಾರೆ. ಕೌಶಲ ವೃದ್ಧಿಸಿಕೊಳ್ಳುವಂತೆ ಸಲಹೆಯನ್ನೂ ನೀಡಿದ್ದಾರೆ. ಇಲಾಖೆಯಿಂದ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಐಟಿ, ಬಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ.

‘ಅಭ್ಯರ್ಥಿಗಳು ಇಂದಿನ ಅಗತ್ಯಕ್ಕೆ ತಕ್ಕಂತೆ ಕೌಶಲಗಳನ್ನು ರೂಢಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಇಲಾಖೆಯಿಂದ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಸುಧಾರಿಸಿಕೊಂಡರೆ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ‘ ಎಂದು ಹೇಳಿದರು.

ತಿರಸ್ಕೃತವಾದ ಅಭ್ಯರ್ಥಿಗಳಿಗೆ ಸೂಕ್ತ ಕೌಶಲ ತರಬೇತಿ ನಿಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತರಬೇತಿ ಕಾರ್ಯಕ್ರಮ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಯೊಂದಿಗೆ ಕೌಶಲ ಕೂಡ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯುವಜನರಿಗೆ ಅನುಕೂಲವಾಗಲೆಂದು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

–ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT