ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೊಯ್ಲಿಗೆ ಬಂದಿದ್ದ ಭತ್ತ ನೀರು ಪಾಲು

ನೆಲಕ್ಕೊರಗಿರುವ ಬೆಳೆ; ರೈತರಿಗೆ ನಷ್ಟ; ಕಬ್ಬು ಕಟಾವಿಗೂ ತೊಂದರೆ
Last Updated 17 ನವೆಂಬರ್ 2021, 21:17 IST
ಅಕ್ಷರ ಗಾತ್ರ

ಬೆಳಗಾವಿ: ಮಂಗಳವಾರ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಭತ್ತದ ಬೆಳೆಗೆ ಬಹಳಷ್ಟು ಹಾನಿಯಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಹ ಸ್ಥಿತಿ ರೈತರದ್ದಾಗಿದೆ.

ಕೋವಿಡ್‌ ಲಾಕ್‌ಡೌನ್‌ನಿಂದ ಉಂಟಾಗಿದ್ದ ಮಾರುಕಟ್ಟೆ ಸಮಸ್ಯೆ, ಪ್ರವಾಹ ಮತ್ತು ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು ಈಗ ಅಕಾಲಿಕ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ಭಾಗದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಕೊಯ್ಲಿನ ಸಮಯಕ್ಕೇ ಮಳೆಯಾದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಕೊಯ್ಲು ಮಾಡಿದ್ದ ಭತ್ತವನ್ನು ಜಮೀನುಗಳಲ್ಲೇ ಬಣವೆ (ಮೆದೆ) ಹಾಕಿದ್ದರು. ಕೆಲವೆಡೆ ಕೊಯ್ಲು ಮಾಡಿ ಒಣಗಲು ಗದ್ದೆಯಲ್ಲಿ ಬಿಟ್ಟಿದ್ದ ಭತ್ತ ನೀರುಪಾಲಾಗಿದೆ. ನೀರು ಇಂಗುವವರೆಗೆ ಹಾಗೂ ಹುಲ್ಲು ಒಣಗುವವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಇಲಾಖೆ ಮಾಹಿತಿ ‍ಪ್ರಕಾರ,ಒಟ್ಟಾರೆ 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಇದೆ. ಖಾನಾಪುರದಲ್ಲಿ ಅತಿ ಹೆಚ್ಚು ಅಂದರೆ 46 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಬಹುತೇಕ ಭತ್ತ ಕೊಯ್ಲಿಗೆ ಬಾಕಿ ಇದೆ. ಈ ಪೈಕಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಾವಿರಾರು ಎಕರೆ ಭತ್ತಕ್ಕೆ ಹಾನಿಯಾಗಿದೆ.

ಕಂಗ್ರಾಳಿ ಬಿ.ಕೆ., ಕಂಗ್ರಾಳಿ ಕೆ.ಎಚ್‌., ಯಳ್ಳೂರು, ಮಚ್ಛೆ, ವಡಗಾವಿ, ದೇಸೂರು, ಕಾಕತಿ, ಹಿಂಡಲಗಾ ಮೊದಲಾದ ಕಡೆಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಜಲಾವೃತವಾಗಿದೆ. ವಿಶೇಷ ತಳಿಯಾದ ‘ಬೆಳಗಾವಿ ಬಾಸುಮತಿ’ ಕೂಡ ಹಾಳಾಗಿದೆ.

‘ಮತ್ತೆ ಮಳೆ ಮುಂದುವರಿದರೆ ಭತ್ತದ ಕೊಯ್ಲು, ರಾಶಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೊಯ್ಲು ಮಾಡಿದ ಭತ್ತ ಜಮೀನಿನಲ್ಲೇ ಮೊಳಕೆ ಬರುವ ಸಾಧ್ಯತೆಯೂ ಇದೆ. ಸಮರ್ಪಕ ಪರಿಹಾರ ನೀಡಬೇಕು’ ಎನ್ನುವುದು ರೈತರ ಆಗ್ರಹವಾಗಿದೆ.

ಅಲ್ಲಲ್ಲಿ ಕಬ್ಬು ಕಟಾವಿಗೂ ತೊಂದರೆ:‘ಬೆಳಗಾವಿ ಬಾಸುಮತಿ ಭತ್ತ ಎಕರೆಗೆ 20 ಕ್ವಿಂಟಲ್‌ ಬರುತ್ತಿತ್ತು. ತಲಾ ₹3 ಸಾವಿರದಂತೆ ಮಾರಿದರೂ ₹ 60 ಸಾವಿರ ಸಿಗುತ್ತಿತ್ತು. ಅದನ್ನು ಸರ್ಕಾರ ತುಂಬಿಕೊಡಬೇಕು. ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ಬೆಳೆ ಹಾನಿಯಾಗುವುದನ್ನು ತಪ್ಪಿಸಬೇಕು’ ಎಂದು ಯಳ್ಳೂರಿನ ರೈತ ರಾಜು ಒತ್ತಾಯಿಸಿದರು.

‘ಮಂಗಳವಾರ ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದಾಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಗೋಕಾಕ, ಮೂಡಲಗಿ ಮೊದಲಾದ ತಾಲ್ಲೂಕುಗಳಲ್ಲಿ ಹಿಂಗಾರು ಹಂಗಾಮಿನ ಹಲವು ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕೆಲವೆಡೆ ಹಾನಿಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT