ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ರಿಂಗ್‌ ರಸ್ತೆಯ ಅಡ್ಡಿ, ಆತಂಕ ದೂರ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಸತೀಶ ಜಾರಕಿಹೊಳಿ
Published 15 ಜೂನ್ 2024, 14:07 IST
Last Updated 15 ಜೂನ್ 2024, 14:07 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿಯ ವರ್ತುಲ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಲ್ಲಿ ಕೆಲವು ತಪ್ಪುಗಳಾಗಿದ್ದವು. ಆ ಕಾರಣಕ್ಕೆ ವಿಳಂಬವಾಗಿದೆ. ಈಗ ಸಮಸ್ಯೆ ಬಗೆಹರಿಸಿದ್ದೇನೆ. ಶೀಘ್ರವೇ ರಿಂಗ್ ರಸ್ತೆ ನಿರ್ಮಾಣವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಯಾವುದೇ ಕಾಮಗಾರಿಗೆ ಸ್ವಾಧೀನಕ್ಕೂ ಮುನ್ನ ಟೆಂಡರ್‌ ಕರೆಯುವುದು ತಪ್ಪು. ಅದೇ ಕಾರಣಕ್ಕೆ ರಿಂಗ್‌ ರಸ್ತೆ ನನೆಗುದಿಗೆ ಬಿದ್ದಿದೆ’ ಎಂದರು.

‘ನಗರಕ್ಕೆ ಹೊಂದಿಕೊಂಡ ಕಣಬರ್ಗಿಯಲ್ಲಿ ಬುಡಾದಿಂದ ಕೈಗೊಂಡ ಬಡಾವಣೆ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಲೆಔಟ್‌ನ ಹೊಸ ವಿನ್ಯಾಸಕ್ಕೆ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ. ಅಧಿಕಾರಿಗಳ ಸಭೆ ಕರೆದು ಚುರುಕು ಮುಟ್ಟಿಸಲಾಗುವುದು. ಇದಾದ ಬಳಿಕ ಹೊಸ ಬಡಾವಣೆ ನಿರ್ಮಾಣ ಮಾಡಬೇಕೋ, ಬೇಡವೋ ಎಂಬ ಬಗ್ಗೆ ನಿರ್ಧರಿಸಲಾಗುವುದು’ ಎಂದರು.

‘ಹೊಸ ಲೇಔಟ್‌ ನಿರ್ಮಿಸಬೇಕಾದರೆ ಕೆಲವು ತಿದ್ದುಪಡಿಗಳಾಗಿವೆ. ಹೊಸ ಕಾನೂನುಗಳಿಂದ ರೈತರಿಗೆ ಅನೂಕುಲ ಇದೆ. ರೈತರಿಗೆ ನಾವು ಮನವರಿಕೆ ಮಾಡಿದರೆ ಮಾತ್ರ ಹೊಸ ಲೆಔಟ್‌ ಮಾಡಲು ಸಾಧ್ಯ’ ಎಂದು ಹೇಳಿದರು.

‘ಬುಡಾ’ದಲ್ಲಿ ನಡೆದ ಅಕ್ರಮಗಳ ಬಗ್ಗೆ ಬೆಂಗಳೂರಿನ ಐಎಎಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ವರದಿ ಆಧರಿಸಿ ಕ್ರಮ ವಹಿಸಲಾಗುವುದು. ಇದು ಸುದೀರ್ಘ ತನಿಖೆ ಆಗಬೇಕಾದ ಕಾರಣ ಹೆಚ್ಚು ಸಮಯ ಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅಕ್ರಮ ಬಡಾವಣೆಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಕೆಲವರು ವಾದಿಸುತ್ತಾರೆ. ಆದರೆ, ಹಾಗೆ ಮಾಡಲು ಬರುವುದಿಲ್ಲ. ಬಡಾವಣೆ ಅಕ್ರಮವೋ, ಸಕ್ರಮವೋ ಮೂಲ ಅವಶ್ಯಕತೆಯಾದ ಕುಡಿಯುವ ನೀರು, ವಿದ್ಯುತ್, ರಸ್ತೆ ನಿರ್ಮಿಸಬೇಕು ಎಂಬ ನಿರ್ದೇಶನವಿದೆ’ ಎಂದು ಸಚಿವ ಪ್ರತಿಕ್ರಿಯಿಸಿದರು.

‘ನಟ ದರ್ಶನ್‌ ಅವರನ್ನು ರಕ್ಷಣೆ ಮಾಡಲು ಒತ್ತಡ ಹಾಕುತ್ತಿರುವ ಸಚಿವ ಯಾರೆಂದು ನನಗೆ ಗೊತ್ತಿಲ್ಲ. ಅದನ್ನು ಬೆಂಗಳೂರಿನಲ್ಲೇ ಕೇಳಬೇಕು’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಮಟಳ್ಳಿ– ಬೇರೆ ಅರ್ಥ ಕಲ್ಪಿಸುವುದು ಬೇಡ:

‘ಮಾಜಿ ಶಾಸಕ ಮಹೇಶ ಕುಮಟಳ್ಳಿ ನಮ್ಮ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ನಾವು ಅವರ ಮನೆಗೆ ಹೋಗುತ್ತಿದ್ದೇವು. ಈಗ ನಾವು ಅಧಿಕಾರದಲ್ಲಿ ಇದ್ದಿದ್ದರಿಂದ ಅವರು ಬಂದಿದ್ದಾರೆ ಅಷ್ಟೇ. ಕುಮಟಳ್ಳಿ ಅಷ್ಟೇ ಅಲ್ಲ; ಶ್ರೀಮಂತ ಪಾಟೀಲ, ದುರ್ಯೋಧನ ಐಹೊಳೆ, ಎಸ್.ಟಿ. ಸೋಮಶೇಖರ್‌, ವಿಠ್ಠಲ್‌ ಹಲಗೆಕರ ಸೇರಿದಂತೆ ಬಿಜೆಪಿ ಹಲವು ಶಾಸಕರು, ನಾಯಕರು ನಮ್ಮ ಮನೆಗೆ ಬರುತ್ತಾರೆ. ಕೆಲಸ, ಕಾರ್ಯಗಳಿದ್ದರೆ ನಾಯಕರು ಬರುವುದು ಸಹಜ’ ಎಂದು ಪ್ರತಿಕ್ರಿಯಿಸಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲ ಇಲಾಖೆಗೆ ಅನುದಾನ ಸಿಗುತ್ತಿದೆ. ಅನುದಾನ ಸಿಕ್ಕಿಲ್ಲ ಎಂಬ ಪ್ರಶ್ನೆಯ ಉದ್ಬವಿಸಿಲ್ಲ. ಗ್ಯಾರಂಟಿಗಳನ್ನು ಕೂಡ ನಿಲ್ಲಿಸುವುದಿಲ್ಲ. ಹೊಸ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆಯೂ ಈಗ ಮಾತು ಇಲ್ಲ’ ಎಂದು ಹೇಳಿದರು.

‘ಆಡಳಿತಕ್ಕೆ ಚುರುಕು’

‘ಕಳೆದ ಮೂರು ತಿಂಗಳಿಂದ ಚುನಾವಣೆಯ ಕಾರಣ ಆಡಳಿತ ನಿಧಾನವಾಗಿತ್ತು. ಹೊಸ ಕಾಮಗಾರಿಗಳ ಆರಂಭಕ್ಕಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಶೀಘ್ರವೇ ಹೊಸ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿದರು.

‘ಜೂನ್‌ ಅಂತ್ಯದೊಳಗೆ ಮಹಾನಗರ ಪಾಲಿಕೆ, ಕೆಡಿಪಿ ಸೇರಿದಂತೆ ಪ್ರತಿ ಇಲಾಖೆಗಳ ಸಭೆಗಳನ್ನು ನಡೆಸಿ ಆಡಳಿತಕ್ಕೆ ವೇಗ ನೀಡಲಾಗುವುದು’ ಎಂದರು.

‘ಬುಡಾ’ ಪ್ರಗತಿ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಇಲ್ಲಿನ ಬುಡಾ ಕಚೇರಿಯಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಲಕರ, ಶಾಸಕರಾದ ಅಭಯ ಪಾಟೀಲ, ಆಸೀಫ್‌ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಅಧಿಕಾರಿಗಳು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT