ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಡೆಂಗಿ ದಾಂಗುಡಿ: ಬೇಕು ಮುನ್ನೆಚ್ಚರಿಕೆ

ಸ್ವಚ್ಛ ನೀರಿನಲ್ಲೇ ಹುಟ್ಟುತ್ತದೆ ಈಡೀಸ್‌ ಈಜಿಪ್ಟೈ ಸೊಳ್ಳೆ; ಹಗಲಿನಲ್ಲಿ ಮಾತ್ರ ಕಚ್ಚುವ ಕ್ರಿಮಿ
Last Updated 4 ಅಕ್ಟೋಬರ್ 2022, 4:07 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಸಕ್ತ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ 207 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1,683ಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿ ತಪಾಸಣೆ ನಡೆಸಲಾಗಿದೆ.

ಡೆಂಗಿಯಿಂದಾಗಿ ನೆರೆ ರಾಜ್ಯದಲ್ಲಿ ಚಿಕಿತ್ಸೆಗೆ ಒಳಗಾಗಿ ಮೃತಪಟ್ಟವರ ಮಾಹಿತಿ ಇದೆ. ಆದರೆ, ಜಿಲ್ಲೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವರದಿಗಳು ಬಂದಿಲ್ಲ ಎಂಬುದು ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿ.

ಏತನ್ಮಧ್ಯೆ, ಆರೋಗ್ಯ ಇಲಾಖೆಯಿಂದ ತಪಾಸಣಾ ಕ್ರಮ ಜರುಗಿಸಲಾಗಿದೆ. ಆದರೆ, ಮುಂಜಾಗ್ರತಾ ಕ್ರಮಗಳು ಸೂಕ್ತವಾಗಿಲ್ಲ ಎನ್ನುವುದು ಜನರ ತಕರಾರು. ಲಾರ್ವ ಸಮೀಕ್ಷೆ, ಅರಿವು ಮೂಡಿಸುವುದು, ತ್ಯಾಜ್ಯ ವಿಲೇವಾರಿ, ಔಷಧ ಸಂಗ್ರಹ, ಬಿಳಿರಕ್ತ ಕಣಗಳ ಸಂಗ್ರಹ ಸೇರಿದಂತೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳು ಅಗತ್ಯ ಎನ್ನುತ್ತಾರೆ ಸೋಂಕಿತರು.

ಯುವಕನ ಸಾವು: ಡೆಂಗಿ ಜ್ವರದಿಂದ ಬಳಲುತ್ತಿದ್ದ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ಯುವಕ ಪ್ರೇಮ್ ಸಂಜಯ ಕಮತೆ (19) ಶುಕ್ರವಾರ ಮಹಾರಾಷ್ಟ್ರದ ಇಚಲಕರಂಜಿಯ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಸಾವಿನಿಂದ ಜಿಲ್ಲೆಯಲ್ಲಿ ಡೆಂಗಿ ಭೀತಿ ಆವರಿಸಿದೆ. ಜ್ವರ ಕಾಣಿಸಿಕೊಂಡ ಕೆಲವರು ಆಸ್ಪತ್ರೆಗೆ ದೌಡಾಯಿಸಿ ತಪಾಸಣೆಗೆ ಒಳಗಾದರು.

ಸೋಂಕು ಹೆಚ್ಚಳಕ್ಕೆ ಕಾರಣವೇನು?: ‘ಈಡೀಸ್‌ ಈಜಿಪ್ಟೈ’ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗಿ ಬರುತ್ತದೆ. ಶುದ್ಧ ನೀರಿನಲ್ಲಿ ಹುಟ್ಟುವುದೇ ಈ ಸೊಳ್ಳೆಯ ಅಪಾಯಕಾರಿ ಗುಣ. ಇದೊಂದೇ ಸೊಳ್ಳೆಯಿಂದ ಡೆಂಗಿ, ಚಿಕೂನ್‌ ಗುನ್ಯ ಹಾಗೂ ಜೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಂಕುಗಳು ಹುಟ್ಟುತ್ತವೆ.

ನಗರ, ಪಟ್ಟಣಗಳಲ್ಲಿ ಮನೆ ಬಳಕೆಯ ವಸ್ತುಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪ್ಲಾಸ್ಟಿಕ್‌ ಬ್ಯಾಗ್‌, ಪ್ಲಾಸ್ಟಿಕ್‌ ಬಕೆಟ್‌, ಬುಟ್ಟಿ, ಕೊಡ, ವಾಹನಗಳ ಟೈರ್, ಟ್ಯೂಬ್‌ಗಳ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ರೂಢಿ. ಅಂಥ ವಸ್ತುಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಒಂದು ಸೊಳ್ಳೆ ಒಂದು ಹನಿ ನೀರಿನಲ್ಲಿಯೂ ಮೊಟ್ಟೆ ಇಡಬಲ್ಲದು. ಹೀಗೆ ಒಂದು ಬಾರಿಗೆ ಒಂದು ಸೊಳ್ಳೆ 300ರಿಂದ 350 ಮೊಟ್ಟೆಗಳನ್ನು ಇಡುತ್ತದೆ. ಒಂದೇ ವಾರದಲ್ಲಿ ಅವೆಲ್ಲವೂ ರೆಕ್ಕೆ ಬೆಳೆದು ಹಾರಾಡಲು ಶುರು ಮಾಡುತ್ತವೆ. ಅಂದರೆ ಎಲ್ಲಿ ಒಂದು ಸೊಳ್ಳೆ ಪತ್ತೆಯಾಗುತ್ತದೆಯೋ ಅಲ್ಲಿ ಒಂದೇ ವಾರದಲ್ಲಿ ಸಾವಿರ– ಸಾವಿರ ಸಂಖ್ಯೆಯಲ್ಲಿ ಹುಟ್ಟುತ್ತವೆ ಎನ್ನುತ್ತಾರೆ ಕೀಟಶಾಸ್ತ್ರಜ್ಞರು.

ಇಲಾಖೆಯ ಕ್ರಮಗಳೇನು?:

ಡೆಂಗಿ ಸೊಳ್ಳೆ ಹುಟ್ಟದಂತೆ ಎಚ್ಚರಿಕೆ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಯಾವುದೇ ಊರಲ್ಲಿ ಪ್ರಕರಣ ಕಂಡುಬಂದರೂ ಸ್ಥಳ ಪರಿಶೀಲನೆ ನಡೆಸಿ, ನಿಂತ ನೀರಿನಲ್ಲಿ ಟೆಮಿಫಾಸ್‌ ದ್ರಾವಣ ಸುರಿದು ಸೊಳ್ಳೆಯ ಲಾರ್ವ ನಾಶ ಮಾಡಲಾಗುತ್ತಿದೆ. ಒಂದೇ ಸ್ಥಳದಲ್ಲಿ ಹೆಚ್ಚು ಪ್ರಕರಣ ಕಂಡುಬಂದರೆ ಫಾಗಿಂಗ್‌ ಮಾಡಲಾಗುತ್ತದೆ. ಟೈರ್, ತೆಂಗಿನಕಾಯಿ ಚಿಪ್ಪುಗಳನ್ನು ಹಾಗೇ ಬಿಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ
ಮಾಹಿತಿ.

**

ಡೆಂಗಿಯಿಂದ ರಕ್ಷಣೆ ಹೇಗೆ?

ಮಕ್ಕಳಿಗೆ ಉದ್ದ ತೋಳಿನ ಉಲನ್‌ ಬಟ್ಟೆ ಹಾಕಿದರೆ ಸೊಳ್ಳೆ ಕಚ್ಚುವುದಿಲ್ಲ

ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ

ಪ್ರತಿದಿನ ಬೇವಿನ ತಪ್ಪಲು, ಲೋಬಾನ ಹೊಗೆ ಅಥವಾ ಸೊಳ್ಳೆ ಬತ್ತಿಗಳನ್ನು ಉರಿಸಿ

ಮನೆಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ

ಮನೆಯಲ್ಲಿ ವಾಟರ್‌ ಫಿಲ್ಟರ್‌, ಬಕೀಟ್‌, ಟ್ಯಾಂಕ್‌, ಪೂಜೆಯ ಜಗಲಿಕಟ್ಟೆ, ಡ್ರಮ್‌ಗಳನ್ನು ಎರಡು ದಿನಕ್ಕೊಮ್ಮೆ ಚೆನ್ನಾಗಿ ಉಜ್ಜಿ ತೊಳೆಯಿರಿ
**
ನಗರದಲ್ಲಿವೆ ನಾಲ್ಕು ಲ್ಯಾಬ್‌

ಬಿಮ್ಸ್‌, ಜಿಲ್ಲಾ ಆಸ್ಪತ್ರೆ, ಕೆಎಲ್‌ಇಎಸ್‌ ಆಸ್ಪತ್ರೆ, ಡಯಗ್ನಾಸ್ಟಿಕ್‌ ಸೆಂಟರ್‌ ಸೇರಿ ನಾಲ್ಕು ವಿಆರ್‌ಡಿಎಲ್‌ (ವೈರಸ್‌ ರಿಸರ್ಜ್ ಅಂಡ್‌ ಡಯಾಗ್ನಾಸ್ಟಿಕ್‌ ಲ್ಯಾಬ್‌) ಪ್ರಯೋಗಾಲಯಗಳು ಇವೆ. ವೈರಾಣು ಪರೀಕ್ಷೆ ನಿರಂತರವಾಗಿ ಸಾಗಿದೆ.

**
ತಿಳಿದಿರಬೇಕಾದ ಅಂಶಗಳು

ಡೆಂಗಿ ಜ್ವರದಲ್ಲಿ ಮೂರು ವಿಧ: 1) ಸಾಧಾರಣ ಡೆಂಗಿ

2) ರಕ್ತಸ್ರಾವ ಡೆಂಗಿ 3) ಶಾಕ್‌ ಡೆಂಗಿ

104– ರಕ್ತ ಹಾಗೂ ರಕ್ತಕಣಗಳ ತುರ್ತು ಅಗತ್ಯಕ್ಕಾಗಿ ಕರೆ ಮಾಡಬೇಕಾದ ಸಹಾಯವಾಣಿ ಸಂಖ್ಯೆ

ಜೀಕಾ: ಈಡಿಪಸ್‌ ಈಜಿಪ್ಟೈ ಸೊಳ್ಳೆಯಿಂದ ಬರುವ ಈ ರೋಗ ಹಸುಳೆಗಳನ್ನು ಬಾಧಿಸುತ್ತದೆ. ಗರ್ಭಿಣಿಯರು ತುಂಬ ಎಚ್ಚರಿಕೆ ವಹಿಸಬೇಕು.

ವಾರಕ್ಕೊಮ್ಮೆ ‘ಡ್ರೈ–ಡೇ’ ಮಾಡಿ; ಮನೆಯ ಎಲ್ಲ ಪಾತ್ರೆಗಳನ್ನೂ ಸ್ವಚ್ಛವಾಗಿ ತೊಳೆದು ಒಣಗಿಸಿ

ಬೆಳಿಗ್ಗೆ 8ರೊಳಗೆ ಸಂಜೆ ಕತ್ತಲಾಗುವುದೊಳಗೆ ಮಾತ್ರ ಈ ಸೊಳ್ಳೆಗಳು ಕಚ್ಚುತ್ತವೆ.

ತಂಡ ರಚನೆ: ಸಾಂಕ್ರಾಮಿಕ ರೋಗ ನಿಯಂತ್ರನಕ್ಕೆ ವಿವಿಧ ಇಲಾಖೆಗಳನ್ನು ಒಳಗೊಂಡ ‘ಸಮಗ್ರ ಅಂತರ್‌ ಇಲಾಖೆ ನಿಯಂತ್ರಣ ಕ್ರಮ’ ಜಾರಿಯಾಗಿದೆ.
*

ಸೊಳ್ಳೆ ಗುರುತಿಸುವುದು ಹೇಗೆ?

ಈಡೀಸ್‌ ಈಜಿಪ್ಟೈ ಸೊಳ್ಳೆ ಮೈಮೇಲೆ ಬಿಳಿಚುಕ್ಕೆಗಳು ಇರುವುದರಿಂದ ಸುಲಭವಾಗಿ ಗುರುತಿಸಬಹುದು. ಈ ಚುಕ್ಕೆಗಳ ಕಾರಣವೇ ಇದನ್ನು ‘ಟೈಗರ್‌ ಸೊಳ್ಳೆ’ ಎಂದೂ ಗುರುತಿಸಲಾಗುತ್ತದೆ. ಈ ಮೊಟ್ಟೆಗಳ ಗಟ್ಟಿತನ ಎಷ್ಟಿರುತ್ತದೆ ಎಂದರೆ ಯಾವುದೇ ವಸ್ತುವಿನಲ್ಲಿಯೂ ವರ್ಷದವರೆಗೆ ಅದು ಅಂಟಿಕೊಂಡಿರಬಲ್ಲದು. ಅದಕ್ಕೆ ನೀರಿನ ಸಂಪರ್ಕ ಬಂದ ತಕ್ಷಣ ಬೆಳವಣಿಗೆ ಶುರುವಾಗುತ್ತದೆ.

**

ಅಂಕಿ ಅಂಶ

ಜಿಲ್ಲೆಯ ಡೆಂಗಿ ಮಾಹಿತಿ

3019:ಈವರೆಗೆ ಗುರುತಿಸಿದ ಪ್ರಕರಣಗಳು

1683:ಪರೀಕ್ಷೆ ಮಾಡಿಸಿದ ಮಾದರಿಗಳು

207:ಸರ್ಕಾರಿ ಲ್ಯಾಬ್‌ನಿಂದ ಖಚಿತಪಟ್ಟವು

10:ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ

400:ಕಳೆದ ವರ್ಷ ಪರೀಕ್ಷೆ ಮಾಡಿಸಿದ ಮಾದರಿಗಳ ಸಂಖ್ಯೆ

91:ಕಳೆದ ವರ್ಷ ದೃಢಪಟ್ಟ ಡೆಂಗಿ ಪ್ರಕರಣಗಳು
**


ತೀವ್ರ ಜ್ವರ ಹಾಗೂ ಬೊಬ್ಬೆ ಲಕ್ಷಣಗಳು ಕಂಡುಬಂದ ತಕ್ಷಣ ತಪಾಸಣೆಗೆ ಒಳಗಾಗಬೇಕು. ಇದರಿಂದ ಪ್ಲೇಟ್‌ಲೇಟ್‌ಗಳು ಕಡಿಮೆಯಾಗುವ ಮುನ್ನ ಚಿಕಿತ್ಸೆ ಕೊಡಬಹುದು
- ಡಾ.ಎಂ.ಎಸ್‌.ಪಲ್ಲೇದ, ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ
*
ಮಳೆಗಾಲಕ್ಕೂ ಮುನ್ನವೇ ಡೆಂಗಿ, ಚಿಕೂನ್ ಗುನ್ಯ ರೋಗಗಳ ನಿಯಂತ್ರಣದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಈಗ ನಿರಂತರ ಮಳೆ ಬೀಳುತ್ತಿದೆ. ಆದರೂ ಫಾಗಿಂಗ್‌ ಮಾಡಿಲ್ಲ
- ಚಂದ್ರಶೇಖರ ಮುನವಳ್ಳಿ ಕಾರ್ಮಿಕ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT