ಭಾನುವಾರ, ಜನವರಿ 19, 2020
26 °C

ಬೆಳಗಾವಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ 18ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರ ಸಂಸ್ಥೆಯು 10ನೇ ಬೆಳಗಾವಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಇದೇ 18ರಿಂದ ನಾಲ್ಕು ದಿನಗಳ ಕಾಲ ಇಲ್ಲಿನ ಹಳೆ ಪಿ.ಬಿ. ರಸ್ತೆಯಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜಿಸಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಭಯ ಪಾಟೀಲ, ‘ರಾಜ್ಯದ ಪಟುಗಳು ಸೇರಿದಂತೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುಮಾರು 50 ಜನ ಗಾಳಿಪಟ ಹಾರಿಸುವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ನೆದರ್‌ಲ್ಯಾಂಡ್‌, ಇಂಗ್ಲೆಂಡ್‌, ಇಂಡೋನೇಷ್ಯಾ, ಥಾಯ್ಲೆಂಡ್‌, ತುನೇಷಿಯಾ ಸೇರಿದಂತೆ ವಿವಿಧ ದೇಶಗಳಿಂದ ಸುಮಾರು 15 ಜನ ಪಟುಗಳು ಭಾಗವಹಿಸಲಿದ್ದಾರೆ. ಬೆಳಗಾವಿಯ ಸಂದೇಶ ಕಡ್ಡಿ ಹಾಗೂ ಡಾ.ಎಂ.ಎಸ್‌ ಕಡ್ಡಿ ಕೂಡ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಗಾಳಿಪಟ ಉತ್ಸವದ ಜೊತೆಗೆ 18ರಂದು ಮಕ್ಕಳ ಉತ್ಸವ ನಡೆಯಲಿದೆ. 19ರಿಂದ ಮೂರು ದಿನಗಳ ಕಾಲ ಯುವ ಉತ್ಸವ ಆಯೋಜಿಸಲಾಗಿದೆ. ಕೊನೆಯ ದಿನ ಫ್ಯಾಷನ್‌ ಶೋ ಹಾಗೂ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಚಾಕೊಲೇಟ್‌, ಬಲೂನ್‌ ಉತ್ಸವ ಮುಖ್ಯ ಆಕರ್ಷಣೆಯಾಗಲಿವೆ’ ಎಂದರು.

ಅನುದಾನಕ್ಕೆ ಕೋರಿಕೆ: ‘ಗುಜರಾತ್‌, ರಾಜಸ್ಥಾನ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿದೆ. ಇಲ್ಲಿ ನಾವು ಖಾಸಗಿಯಾಗಿ ಆಯೋಜಿಸುತ್ತಿದ್ದೇವೆ. ಪ್ರತಿವರ್ಷ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ಇದರಿಂದ ಸ್ಥಳೀಯವಾಗಿ ವ್ಯಾಪಾರ ವಹಿವಾಟು ಹೆಚ್ಚುತ್ತದೆ, ಪ್ರವಾಸೋದ್ಯಮ ಬೆಳೆಯುತ್ತದೆ. ಅದಕ್ಕಾಗಿ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ಚೈತನ್ಯ ಕುಲಕರ್ಣಿ, ಅಶೋಕ ನಾಯ್ಕ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು