ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ: ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Published 2 ಜುಲೈ 2024, 11:38 IST
Last Updated 2 ಜುಲೈ 2024, 11:38 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ 22ನೇ ಅವಧಿಗೆ ನಾಲ್ಕು ಸ್ಥಾಯಿ ಸಮಿತಿಗಳ 28 ಸದಸ್ಯ ಸ್ಥಾನಗಳಿಗೆ ಮಂಗಳವಾರ ಅವಿರೋಧ ಆಯ್ಕೆ ನಡೆಯಿತು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಯ ತಲಾ ಏಳು ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.

ಮೂರು ಸಮಿತಿಗಳಿಗೆ ತಲಾ ಏಳು ಉಮೇದುವಾರಿಕೆ ಸಲ್ಲಿಕೆಯಾಗಿದ್ದವು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಷ್ಟೇ ಎಂಟು ನಾಮಪತ್ರ ಸಲ್ಲಿಕೆಯಾಗಿದ್ದವು. ಈ ಪೈಕಿ ಒಬ್ಬರು ಹಿಂದಕ್ಕೆ ಪಡೆದಿದ್ದರಿಂದ ನಾಲ್ಕೂ ಸಮಿತಿಗಳಿಗೆ ಅವಿರೋಧ ಆಯ್ಕೆಯಾಯಿತು. ಮುಂದಿನ 1 ವರ್ಷದ ಅವಧಿಗೆ ಇವರೆಲ್ಲರೂ ಕಾರ್ಯನಿರ್ವಹಿಸಲಿದ್ದಾರೆ.

‘ನಾಲ್ಕು ಸ್ಥಾಯಿ ಸಮಿತಿಗಳ 28 ಸ್ಥಾನಗಳಿಗೆ 28 ನಾಮಪತ್ರ ಸಲ್ಲಿಕೆಯಾದ ಕಾರಣ, ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಶೀಘ್ರವೇ ದಿನಾಂಕ ಘೋಷಿಸಲಾಗುವುದು’ ಎಂದು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಮೇಯರ್‌ ಸವಿತಾ ಕಾಂಬಳೆ, ಉಪಮೇಯರ್‌ ಆನಂದ ಚವ್ಹಾಣ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಇತರರಿದ್ದರು.

ಅಭಿವೃದ್ಧಿಗೆ ಶ್ರಮಿಸುತ್ತೇವೆ:

‘ಪಾಲಿಕೆಯ ಆಡಳಿತ ಮತ್ತು ವಿರೋಧ ಪಕ್ಷದವರೆಲ್ಲ ಸೇರಿಕೊಂಡು ಸ್ಥಾಯಿ ಸಮಿತಿಗಳಿಗೆ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿದ್ದೇವೆ. ಪ್ರತಿ ಸಮಿತಿಯಲ್ಲಿ ಆಡಳಿತ ಪಕ್ಷದ ಐವರು, ವಿರೋಧ ಪಕ್ಷಗಳ ಇಬ್ಬರು ಸದಸ್ಯರಿದ್ದಾರೆ. ಎಲ್ಲರೂ ಒಂದಾಗಿ ಬೆಳಗಾವಿ ಮಹಾನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ಆಡಳಿತ ಪಕ್ಷದ ನಾಯಕ ಗಿರೀಶ ಧೊಂಗಡಿ ಸುದ್ದಿಗಾರರಿಗೆ ಹೇಳಿದರು.

‘ಕಳೆದ ಬಾರಿ ಸ್ಥಾಯಿ ಸಮಿತಿಗಳಲ್ಲಿದ್ದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಕೆಲವು ಭಿನ್ನಾಭಿಪ್ರಾಯ ಉಂಟಾದ ಕಾರಣ, ನಗರದ ಅಭಿವೃದ್ಧಿಗೆ ಹಿನ್ನಡೆಯಾಯಿತು. ಈ ಸಲ ಎಲ್ಲರೂ ಒಂದಾಗಿ ನಗರದ ಸುಧಾರಣೆಗೆ ಪ್ರಯತ್ನಿಸೋಣ’ ಎಂದು ವಿರೋಧ ಪಕ್ಷದ ನಾಯಕ ಮುಜಮ್ಮಿಲ್‌ ಡೋಣಿ ತಿಳಿಸಿದರು.

ಅವಿರೋಧವಾಗಿ ಆಯ್ಕೆಯಾದ ಸದಸ್ಯರು

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಬ್ರಹ್ಮಾನಂದ ಮಿರಜಕರ, ನಿತಿನ ಜಾಧವ, ನೇತ್ರಾವತಿ ಭಾಗವತ, ಪೂಜಾ ಪಾಟೀಲ, ಹನುಮಂತ ಕೊಂಗಾಲಿ, ಐಕೀರಾ ಮುಲ್ಲಾ, ಝರೀನಾ ಫತ್ತೇಖಾನ್‌.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ದೀಪಾಲಿ ಟೋಪಗಿ, ಶ್ರೀಶೈಲ ಕಾಂಬಳೆ, ರಾಜು ಭಾತಕಾಂಡೆ, ಮಾಧವಿ ರಾಘೋಚೆ, ರೂಪಾ ಚಿಕ್ಕಲದಿನ್ನಿ, ಅಸ್ಮಿತಾ ಪಾಟೀಲ, ಲಕ್ಷ್ಮಿ ಲೋಕರಿ.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ಜಯತೀರ್ಥ ಸವದತ್ತಿ, ಉದಯಕುಮಾರ ಉಪರಿ, ಸಂತೋಷ ಪೆಡನೇಕರ್‌, ರವಿರಾಜ ಸಾಂಬ್ರೇಕರ, ಅಭಿಜಿತ ಜವಳಕರ, ಬಸವರಾಜ ಮೋದಗೇಕರ, ಶಿವಾಜಿ ಮಂಡೋಳಕರ.

ಲೆಕ್ಕಗಳ ಸ್ಥಾಯಿ ಸಮಿತಿ: ಶಂಕರ ಪಾಟೀಲ, ಮಂಗೇಶ ಪವಾರ, ಸಾರಿಕಾ ಪಾಟೀಲ, ಪ್ರಿಯಾ ಸಾತಗೌಡ, ರೇಷ್ಮಾ ಕಾಮಕರ, ರೇಷ್ಮಾ ಭೈರಕದಾರ, ಶಕೀಲಾ ಮುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT