ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯಕೀಯ ಕಾಲೇಜು ಬಿಜೆಪಿ ಕೊಡುಗೆ: ಮಾಜಿ ಶಾಸಕ ಕುಮಠಳ್ಳಿ

Published 10 ಆಗಸ್ಟ್ 2023, 13:27 IST
Last Updated 10 ಆಗಸ್ಟ್ 2023, 13:27 IST
ಅಕ್ಷರ ಗಾತ್ರ

ಬೆಳಗಾವಿ: ‘ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ನಿರ್ಮಾಣವಾಗಿರುವ ಪಶು ವೈದ್ಯಕೀಯ ಕಾಲೇಜು ಬಿಜೆಪಿ ಕೊಡುಗೆ. ನಮ್ಮ ಸರ್ಕಾರದ ಅವಧಿಯಲ್ಲೇ ಅದಕ್ಕೆ ಅನುದಾನ ಬಿಡುಗಡೆಯಾಗಿದ್ದು, ಈಗ ಕೆಲಸ ಪೂರ್ಣಗೊಂಡಿದೆ’ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಕಾಮಗಾರಿಗಳನ್ನು ಉದ್ಘಾಟಿಸುವುದು ವಾಡಿಕೆ. ಹಾಗಾಗಿ ಆಗಸ್ಟ್‌ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೇಜು ಉದ್ಘಾಟಿಸುತ್ತಿದ್ದಾರೆ. ಆದರೆ, ಇದು ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲೇ ಆಗಿರುವ ಯೋಜನೆ’ ಎಂದರು.

‘ಬಸವಣ್ಣನವರ ಪುತ್ಥಳಿಯನ್ನೂ ಸಿದ್ದರಾಮಯ್ಯ ಶುಕ್ರವಾರ ಅನಾವರಣಗೊಳಿಸುತ್ತಿದ್ದಾರೆ. ಈ ಕಾಮಗಾರಿಗೆ ನನ್ನ ಅಧಿಕಾರವಧಿಯಲ್ಲಿ ₹19 ಲಕ್ಷ ಅನುದಾನ ಒದಗಿಸಿದ್ದೇನೆ. ಬಸವೇಶ್ವರ ವೃತ್ತ ಅಭಿವೃದ್ಧಿಗೆ ₹5 ಲಕ್ಷ ನೀಡಿದ್ದೇನೆ’ ಎಂದು ತಿಳಿಸಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಆದರೆ, ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ಸ್ಥಗಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಈ ಯೋಜನೆಗೆ ಚಾಲನೆ ಕೊಡಬೇಕು’ ಎಂದು ಕೋರಿದರು.

‘ನನಗಿಂತ ಶಾಸಕ ಲಕ್ಷ್ಮಣ ಸವದಿ ಅವರ ಮೇಲೆಯೇ ಬಿಜೆಪಿ ಋಣ ಹೆಚ್ಚಿದೆ. ನಮ್ಮ ಪಕ್ಷದಿಂದ ಅವರಿಗೆ ಏನು ಅನ್ಯಾಯವಾಗಿದೆ ಗೊತ್ತಿಲ್ಲ. ಆದರೆ, ನಾನು ಮತ್ತು ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ ಎಂದು ಆ ಪಕ್ಷ ಬಿಟ್ಟು ಬಂದಿಲ್ಲ. ಬದಲಾದ ರಾಜಕೀಯ ವಿದ್ಯಮಾನದಿಂದ ಹೊರಬಂದಿದ್ದೇವೆ. ಅಧಿಕಾರದ ಆಸೆಗಾಗಿ ನಾವು ಬಿಜೆಪಿ ಸೇರಿಲ್ಲ’ ಎಂದ ಅವರು, ‘ಲಕ್ಷ್ಮಣ ಸವದಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಜೊತೆಗೆ, ತಾವೂ ಬೆಳೆದಿದ್ದಾರೆ. ನಿಧನರಾದ ನಂತರ ತಮ್ಮ ಹೆಣವೂ ಬಿಜೆಪಿ ಕಚೇರಿ ಮುಂದೆ ಹೋಗಬಾರದು ಎಂದು ಅವರು ಯಾವ ದೃಷ್ಟಿಕೋನದಿಂದ ಹೇಳಿದ್ದಾರೆ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ, ‘2009ರಲ್ಲಿ ಪಶು ವೈದ್ಯಕೀಯ ಕಾಲೇಜು ಮಂಜೂರುಗೊಳಿಸಿದ್ದೇ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ 2013ರಿಂದ 2018ರ ಅವಧಿಯಲ್ಲಿ ಈ ಕಾಲೇಜಿಗೆ ಒಂದು ಪೈಸೆ ಅನುದಾನವನ್ನೂ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ, ಇದಕ್ಕೆ ಅನುದಾನ ನೀಡಿ ಅಗತ್ಯ ಸೌಕರ್ಯ ಕಲ್ಪಿಸಿದೆವು. ಈ ಕಾಲೇಜು ಸ್ಥಾಪಿಸಿರುವ ಶ್ರೇಯ ಬಿಜೆಪಿಗೆ ಸಲ್ಲುತ್ತದೆ’ ಎಂದರು.

‘ಬೆಳಗಾವಿ ತಾಲ್ಲೂಕಿನ ಮಚ್ಛೆಯಲ್ಲಿ ಇತ್ತೀಚೆಗೆ ನಡೆದ ವಿದ್ಯುತ್‌ ವಿತರಣಾ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಸ್ಥಳೀಯ ಶಾಸಕ ಅಭಯ ಪಾಟೀಲ ಅವರನ್ನು ಆಹ್ವಾನಿಸದೆ, ಹೆಸ್ಕಾಂ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು’ ಎಂದು ಎಚ್ಚರಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಇತರರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT