ಬೆಳಗಾವಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮತ್ತು ಮಹಾನಗರ ಘಟಕಗಳ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ‘ಕಾಂಗ್ರೆಸ್ಸಿಗರು ಸ್ವತಃ ಕಳ್ಳತನ ಮಾಡಿ, ಈಗ ನಮ್ಮ ವಿರುದ್ಧ ಕಿರುಚಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲ ಥಾವರಚಂದ ಗೆಹ್ಲೋತ್ ಅವರನ್ನು ಮನಬಂದಂತೆ ನಿಂದಿಸುತ್ತಿದ್ದಾರೆ. ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಅವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
‘ಮುಡಾ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳದಿದ್ದರೆ, ಬಾಂಗ್ಲಾದೇಶ ಪ್ರಧಾನಿಗೆ ಬಂದ ಪರಿಸ್ಥಿತಿ ಕರ್ನಾಟಕದ ರಾಜ್ಯಪಾಲರಿಗೂ ಬರಬಹುದು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಶಶಿಕಲಾ ಜೊಲ್ಲೆ ಭಾಗಿಯಾಗಿರುವ ಪ್ರಕರಣಗಳ ಕುರಿತಾಗಿಯೂ ತನಿಖೆ ನಡೆಸುವಂತೆ ಕಾಂಗ್ರೆಸ್‌ನವರು ಒತ್ತಾಯಿಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ, ‘ಈಗ ಮೊದಲು ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ನಂತರ ಯಾರೇ ತಪ್ಪು ಮಾಡಿದ್ದರೂ, ಎಲ್ಲರ ವಿರುದ್ಧವೂ ತನಿಖೆಯಾಗಲಿ’ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ, ‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ಭ್ರಷ್ಟಾಚಾರಿಗಳು. ನಿಮಗೆ ನಾಚಿಕೆಯಾಗುವುದಿಲ್ಲವೇ ಎನ್ನುತ್ತಿದ್ದ ಮತ್ತು ತಾವು ಕಳಂಕರಹಿತ ರಾಜಕಾರಣಿ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಅವರೇ ಈಗ ಹಗರಣದಲ್ಲಿ ಸಿಲುಕಿದ್ದಾರೆ. ಆದರೆ, ನಾನೇ ವಕೀಲ, ನಾನೇ ನ್ಯಾಯಾಧೀಶ ಮತ್ತು ನನ್ನದೇ ನ್ಯಾಯಾಲಯ ಎಂಬಂತೆ ವರ್ತಿಸುತ್ತಿದ್ದಾರೆ. ನನಗೊಂದು ನ್ಯಾಯ ಹಾಗೂ ಮತ್ತೊಬ್ಬರಿಗೆ ಒಂದು ನ್ಯಾಯ ಎನ್ನುತ್ತಿದ್ದಾರೆ. ನಿಮಗೆ ನಾಚಿಕೆ ಇದ್ದರೆ ಸಿ.ಎಂ ಸ್ಥಾನ ಬಿಟ್ಟುಕೊಡಿ’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್‌ನ ಕೆಲವು ನಾಯಕರು ಏನೇನೋ ಮಾತನಾಡುತ್ತಿದ್ದಾರೆ. ನೀವು ಎಲುಬಿಲ್ಲದ ನಾಲಿಗೆ ಹರಿಬಿಡಬೇಡಿ’ ಎಂದು ಎಚ್ಚರಿಕೆ ಕೊಟ್ಟ ಅವರು, ‘ಇದು ಬಾಂಗ್ಲಾದೇಶವಲ್ಲ, ಭಾರತ ಎಂಬುದನ್ನು ಐವಾನ್ ಡಿಸೋಜಾ ಅರಿತುಕೊಳ್ಳಬೇಕು. ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿರುವ ನಿಮಗೆ ಬಾಂಗ್ಲಾದೇಶಕ್ಕೆ ಹೋಗುವ ಆಸೆಯಿದ್ದರೆ ಹೋಗಿ. ನಾವೇ ಬಸ್ ಅಥವಾ ವಿಮಾನದ ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ‘ಬಾಂಗ್ಲಾದೇಶ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರತಿಭಟಿಸುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇದು ಅವರ ಮನಸ್ಥಿತಿ ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಲೀನಾ ಟೋಪಣ್ಣವರ, ಉಜ್ವಲಾ ಬಡವನ್ನಾಚೆ, ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.