ಶನಿವಾರ, ಸೆಪ್ಟೆಂಬರ್ 21, 2019
21 °C
ಸಿದ್ಧವಾಗಿ 4 ತಿಂಗಳುಗಳು ಕಳೆದಿದೆ

ಅಥಣಿ: ಬಸ್‌ ನಿಲ್ದಾಣ ಉದ್ಘಾಟನೆ ಯಾವಾಗ?

Published:
Updated:
Prajavani

ಅಥಣಿ: ಇಲ್ಲಿ ₹ 3.95 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಉದ್ಘಾಟನೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಕಾಮಗಾರಿ ಪೂರ್ಣಗೊಂಡು 4 ತಿಂಗಳುಗಳೇ ಕಳೆದಿವೆ. ಆದರೆ, ಇಲ್ಲಿಂದ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿಲ್ಲ. ಪರಿಣಾಮ, ಪ್ರಯಾಣಿಕರ ಪರದಾಟ ಮುಂದುವರಿದಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಇಲ್ಲಿನವರೇ ಆದ ಲಕ್ಷ್ಮಣ ಸವದಿ ಸಾರಿಗೆ ಸಚಿವರೂ ಆಗಿದ್ದಾರೆ; ಉಪಮುಖ್ಯಮಂತ್ರಿಯೂ ಹೌದು. ಅವರಿಂದಾದರೂ ನಿಲ್ದಾಣವನ್ನು ಉದ್ಘಾಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ, ಹಿಂದಿನ ಬಸ್‌ ನಿಲ್ದಾಣ ಕಿಷ್ಕಿಂದೆಯಂತಾಗಿತ್ತು. ಇದನ್ನು ಮನಗಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಆಗಿನ ಸಾರಿಗೆ ಸಚಿವ ಎಂ. ರಾಮಲಿಂಗಾ ರೆಡ್ಡಿ 2017ರ ಸೆಪ್ಟೆಂಬರ್‌ ಮೊದಲನೇ ವಾರ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದ್ದರು. ಆರಂಭದಲ್ಲಿ, ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಒಂದೂಮುಕ್ಕಾಲು ವರ್ಷ ಬೇಕಾಯಿತು.

ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಪ್ರಮುಖ ಪಟ್ಟಣವಿದು. ಮಹಾರಾಷ್ಟ್ರ, ವಿಜಯಪುರ, ಬೆಳಗಾವಿ, ಜಮಖಂಡಿ, ಜತ್ತ, ಸಾಂಗ್ಲಿ, ಚಿಕ್ಕೋಡಿ ಹೀಗೆ... ನೂರಾರು ಕಡೆಗಳಿಗೆ ಸಾವಿರಾರು ಮಂದಿ ಪಟ್ಟಣದ ಮೂಲಕ ಸಂಚರಿಸುತ್ತಾರೆ. ನಿತ್ಯ 600 ಬಸ್‌ಗಳು ಸಂಚರಿಸುತ್ತವೆ. ಹಳೆ ಬಸ್‌ ನಿಲ್ದಾಣದಲ್ಲಿ ಇರುವ ಚಿಕ್ಕದಾದ ಜಾಗ ಸಾಲುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ. ಹೊಸ ಬಸ್‌ ನಿಲ್ದಾಣದಲ್ಲಿ ಒಮ್ಮೆಗೆ 20 ಬಸ್‌ಗಳು ನಿಲ್ಲುವುದಕ್ಕೆ ಜಾಗ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ.

‘ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಾರಿಗೆ ಸಚಿವರು ಅಥಣಿಗೆ ಬಂದಾಗ ಅವರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಪೊ ವ್ಯವಸ್ಥಾಪಕ ಪಿ.ಆರ್‌. ಕಿರಣಗಿ ಪ್ರತಿಕ್ರಿಯಿಸಿದರು.

Post Comments (+)