ವ್ಯಾಪಾರ ಕುಸಿತ, ಜಿಎಸ್‌ಟಿಯೊಂದೇ ಕಾರಣವಲ್ಲ!

7
ಹೋಟೆಲ್ ಮಾಲೀಕರ ಅಭಿಪ್ರಾಯ

ವ್ಯಾಪಾರ ಕುಸಿತ, ಜಿಎಸ್‌ಟಿಯೊಂದೇ ಕಾರಣವಲ್ಲ!

Published:
Updated:
Deccan Herald

ಬೆಳಗಾವಿ: ಹೋಟೆಲ್‌ಗಳಲ್ಲಿ ವ್ಯಾ‍ಪಾರ ಕೊಂಚ ಕಡಿಮೆಯಾಗಿದೆ. ಇದಕ್ಕೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯೊಂದೇ ಕಾರಣವಿರದಿರಬಹುದು. ತೆರಿಗೆಯ ಪ್ರಮಾಣ ಹೆಚ್ಚಾಗಿರುವುದನ್ನು ಕೂಡ ಪರಿಗಣಿಸಬೇಕಾಗುತ್ತದೆ.‌ – ಜಿಎಸ್‌ಟಿ ಕುರಿತು ಹೋಟೆಲ್‌ಗಳ ಮಾಲೀಕರ ಅಭಿಪ್ರಾಯಗಳಿವು.

ವ್ಯಾಟ್‌ ಇದ್ದಾಗ, ಶೇ 4ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಜಿಎಸ್‌ಟಿ ಬಂದ ನಂತರ ಸಾಮಾನ್ಯ ಹೋಟೆಲ್‌ಗಳಿಗೆ ಶೇ 12,  ಹವಾನಿಯಂತ್ರಿತ (ಎ.ಸಿ) ಹೋಟೆಲ್‌ಗಳಿಗೆ ಶೇ 18 ಹಾಗೂ ಆಹಾರ ಪೂರೈಕೆ (ಔಟ್‌ಡೋರ್‌ ಕೇಟರಿಂಗ್) ಶೇ 18ರಷ್ಟು ತೆರಿಗೆ ವಿಧಿಸಲಾಯಿತು. ಇದು ಉದ್ಯಮಿಗಳು ಮಾತ್ರವಲ್ಲದೇ, ಗ್ರಾಹಕರ ಮೇಲೂ ಪರಿಣಾಮ ಬೀರಿತ್ತು. ವ್ಯಾಪಾರ ಬಹಳಷ್ಟು ಕಡಿಮೆಯಾಗಿತ್ತು. ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾದ ನಂತರ (ಸೆಪ್ಟೆಂಬರ್‌ 3ನೇ ವಾರದಿಂದ), ಸಾಮಾನ್ಯ ಹೋಟೆಲ್‌ಗಳ ಮೇಲೆ ಶೇ 5, ಎ.ಸಿ. ಹೋಟೆಲ್‌ಗಳಿಗೆ ಶೇ 12ಕ್ಕೆ ಇಳಿಸಲಾಗಿದೆ. ಕೇಟರಿಂಗ್ ಉದ್ಯಮಕ್ಕೆ ಶೇ 18ರಷ್ಟೇ ತೆರಿಗೆ ಇದೆ.

ಈ ಹಿಂದೆ ಲಾಡ್ಜ್‌ಗಳ ಮೇಲೆ ಶೇ 14.5 ಮೌಲ್ಯವರ್ಧಿತ ತೆರಿಗೆ ಇತ್ತು. ಇದರ ಜತೆಗೆ, ಸೇವಾ ತೆರಿಗೆಯೆಂದು ಶೇ 4, ಲಕ್ಸುರಿ ತೆರಿಗೆಯೆಂದು ಶೇ 4.9ನ್ನು ಕೆಲವು ಕಡೆಗಳಲ್ಲಿ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ‍ಪ್ರಕಾರ, ₹ 1000 ಒಳಗೆ ಬಾಡಿಗೆ ವಿಧಿಸುವ ರೂಂಗಳಿಗೆ ತೆರಿಗೆ ಹಾಕುವುದಿಲ್ಲ. ₹ 1000ಕ್ಕಿಂತ ಹೆಚ್ಚು, ₹ 2,500ಕ್ಕಿಂತ ಕಡಿಮೆ ಬಾಡಿಗೆಯ ರೂಂಗಳಿಗೆ ಶೇ 12, ₹ 2500ದಿಂದ ₹ 4,500ವರೆಗಿನ ರೂಂಗಳಿಗೆ ಶೇ 18 ಹಾಗೂ ಅದಕ್ಕಿಂತಲೂ ಹೆಚ್ಚು ಬಾಡಿಗೆ ಇದ್ದರೆ, ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು ನೇರವಾಗಿ, ಗ್ರಾಹಕರಿಗೆ ಪರಿಣಾಮ ಬೀರುತ್ತಿದೆ.

ನಗರದಲ್ಲಿ ಸಾವಿರಕ್ಕೂ ಹೆಚ್ಚು:

ಗರಿಷ್ಠ ಮುಖ ಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದಾಗ, ಚಿಲ್ಲರೆ ಅಭಾವದಿಂದ ಕೆಲವು ತಿಂಗಳುಗಳು ಹೊಡೆತ ಬಿದ್ದಿತ್ತು. ಇದಾದ ಕೆಲವೇ ತಿಂಗಳಲ್ಲಿ ಜಿಎಸ್‌ಟಿ ಜಾರಿಯಾಯಿತು. ಆರಂಭದಲ್ಲಿ ತೆರಿಗೆ ಪ್ರಮಾಣ ಹೆಚ್ಚಿದ್ದರಿಂದ, ವ್ಯಾಪಾರ ಕುಸಿದಿತ್ತು. ಈಗ ಸುಧಾರಣೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಈಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡವು ಸೇರಿ ಸಾವಿರಕ್ಕೂ ಮಿಕ್ಕಿ ಹೋಟೆಲ್‌ಗಳಿವೆ. ದೊಡ್ಡ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ತೆರಿಗೆಯ ಬಿಸಿ ತಟ್ಟುತ್ತಿದೆ. ವ್ಯಾಟ್‌ ಇದ್ದಾಗ ಶೇ 4ರಷ್ಟಿದ್ದ ತೆರಿಗೆ ಜಿಎಸ್‌ಟಿಯಲ್ಲಿ (ಈಗ) ಶೇ 5ಕ್ಕೆ ಹೆಚ್ಚಾಗಿದೆ.

ತೆಗೆದುಕೊಳ್ಳಬೇಕಿದೆ:

‘ವಾರ್ಷಿಕ ₹ 75 ಲಕ್ಷ ವಹಿವಾಟು ಇರುವವರು ಶೇ 5ರಷ್ಟು ತೆರಿಗೆ ಪಾವತಿಸಬೇಕಾಗಿದೆ. ಇದನ್ನು ಗ್ರಾಹಕರಿಂದ ಪಡೆಯಬೇಕಿದೆ. ₹ 75 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ತೊಂದರೆ ಇಲ್ಲ. ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ಹೆಚ್ಚಿನ ತೆರಿಗೆ ಇತ್ತು. ಆಗ ಬಹಳ ತೊಂದರೆಯಾಗಿತ್ತು. ನಂತರ, ಸರಿಪಡಿಸಲಾಗಿದೆ. ಈಗ ಸಹಜ ಸ್ಥಿತಿಗೆ ಬಂದಿದೆ. ಲೆಕ್ಕಪತ್ರ ಸಲ್ಲಿಕೆಯೂ ಸರಳವಾಗಿದೆ’ ಎಂದು ಬೆಳಗಾವಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ವಿಜಯ್ ಸಾಲಿಯಾನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವ್ಯಾಟ್‌ಗೂ ಜಿಎಸ್‌ಟಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಶೇ 1ರಷ್ಟು ತೆರಿಗೆ ಹೆಚ್ಚಾಗಿದೆ. ನೂರರಲ್ಲಿ ಒಂದಿಬ್ಬರು ಪ್ರಶ್ನಿಸುತ್ತಾರೆ. ಅವರಿಗೆ ತೆರಿಗೆ ಕುರಿತು ತಿಳಿಸುತ್ತೇವೆ. ಲೆಕ್ಕಪತ್ರಗಳ ಸಲ್ಲಿಕೆ ಕುರಿತು ಅರ್ಥ ಮಾಡಿಕೊಳ್ಳಲು ತಿಂಗಳು ಬೇಕಾಯಿತು. ನಂತರ, ಸುಗಮವಾಗಿ ನಡೆಯುತ್ತಿದೆ. ದಾಖಲೆಗಳನ್ನೂ ನಿರ್ವಹಿಸುವುದರಿಂದ ತೊಂದರೆಯಾಗಿಲ್ಲ’ ಎಂದು ಪೈ ಹೋಟೆಲ್‌ನ ಅಜಯ್‌ ಪೈ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !