ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾನಾಪುರ | ಸೇತುವೆಗೆ ಅಪ್ಪಳಿಸಿದ ಕಾರು: ಇಬ್ಬರ ಸಾವು

Published 11 ಜುಲೈ 2024, 15:27 IST
Last Updated 11 ಜುಲೈ 2024, 15:27 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣದ ಹೊರವಲಯದ ಜಾಂಬೋಟಿ–ಜತ್ತ ರಾಜ್ಯ ಹೆದ್ದಾರಿಯ ಕುಂಭಾರ ಹಳ್ಳದ ಬಳಿ ಗುರುವಾರ ಪ್ರಯಾಣಿಕರ ಕಾರು ಸೇತುವೆಗೆ ಅಪ್ಪಳಿಸಿದ್ದರಿಂದ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಬೆಳಗಾವಿ ತಾಲ್ಲೂಕು ಮಚ್ಛೆ ಪಟ್ಟಣದ ನಿವಾಸಿ, ಕಾರು ಚಾಲಕ ಶಂಕರ ಮೋಹನ ಗೋಮನಾಚೆ (27) ಮತ್ತು ಆತನ ಸ್ನೇಹಿತ ಆಶೀಷ್ ಮೋಹನ ಪಾಟೀಲ (26) ಎಂದು ಗುರುತಿಸಲಾಗಿದೆ. ಮಚ್ಛೆಯ ನಿಖೇಶ್ ಜಯವಂತ್ ಪವಾರ (26) ಮತ್ತು ಜ್ಯೋತಿಬಾ ಗೋವಿಂದ ಗಾಂವಕರ (29) ಗಾಯಗೊಂಡವರು.  ಜ್ಯೋತಿಬಾ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ನಿಖೇಶ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮಚ್ಛೆಯ ಶಂಕರ ಊಟಕ್ಕೆಂದು ತನ್ನ ಸ್ನೇಹಿತರ ಜೊತೆ ಖಾನಾಪುರಕ್ಕೆ ಬಂದು ಊಟ ಮುಗಿಸಿ ಜಾಂಬೋಟಿ ಮಾರ್ಗವಾಗಿ ಬೆಳಗಾವಿಯತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇವರು ಪ್ರಯಾಣಿಸುತ್ತಿದ್ದ ಕಾರು ಇಳಿಜಾರಿನ ರಸ್ತೆಯಲ್ಲಿ ಅತಿವೇಗದಲ್ಲಿ ಹೊರಟಿದ್ದು, ಕುಂಬಾರ ಹಳ್ಳದ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಸೇತುವೆಯ ತಡೆಗೋಡೆಗೆ ಅಪ್ಪಳಿಸಿ ಮುಂದೆ 100 ಮೀಟರ್ ಸಾಗಿ ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಕಾರಿನ ಮುಂದಿನ ಎರಡೂ ಚಕ್ರಗಳು ಕಾರಿನಿಂದ ಬೇರ್ಪಟ್ಟು ಹಲವು ದೂರದವರೆಗೆ ಸಾಗಿ ಬಿದ್ದಿವೆ. ಈ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ದೊರತ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟು ಕಾರಿನಲ್ಲಿ ಸಿಲುಕಿದ್ದ ಇಬ್ಬರ ಶವಗಳನ್ನು ಹೊರತೆಗೆದು ಖಾನಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಮೃತರ ಸಂಬಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT