ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಟ್ಟ ನಿಲುವಿನ ಹೋರಾಟಗಾರರಾಗಿದ್ದ ಚಂಪಾ: ಸಾಹಿತಿ ಬಿ.ಎಸ್. ಗವಿಮಠ

Last Updated 11 ಜನವರಿ 2022, 15:35 IST
ಅಕ್ಷರ ಗಾತ್ರ

ಬೆಳಗಾವಿ: ‘ಖ್ಯಾತ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಗಟ್ಟಿಯಾದ ಹಾಗೂ ದಿಟ್ಟ ನಿಲುವಿನ ಹೋರಾಟಗಾರನನ್ನು ಕಳೆದುಕೊಂಡಿದೆ’ ಎಂದು ಸಾಹಿತಿ ಬಿ.ಎಸ್. ಗವಿಮಠ ಕಂಬನಿ ಮಿಡಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಚಂಪಾ ಮತ್ತು ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚಂಪಾ ಅವರೊಂದಿಗೆ ನಾಡಿನ ಸಾಹಿತಿಗಳು ಅನೇಕ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಕನ್ನಡ ನಾಡು, ನುಡಿ ಹಾಗೂ ಗಡಿಯ ಬಗ್ಗೆ ಹೊಂದಿದ್ದ ಬದ್ಧತೆಯನ್ನು ಮೆಚ್ಚಿದ್ದರು’ ಎಂದರು.

‘ನಾಡು–ನುಡಿ–ಗಡಿಯ ಪ್ರಶ್ನೆ ಬಂದಾಗ ಸಾಹಿತಿಗಳು ಹೋರಾಟಕ್ಕೆ ಮುಂದಾಗದಿರುವುದು ವಿಷಾದದ ಸಂಗತಿಯಾಗಿದೆ’ ಎಂದು ನುಡಿದರು.

ಸಾಹಿತಿ ಬಸವರಾಜ ಜಗಜಂಪಿ, ‘ವಿಡಂಬನೆ, ಮೊನಚು ಚಂಪಾ ಅವರ ಸಾಹಿತ್ಯ ಕೃತಿಗಳಲ್ಲಿ ಎದ್ದು ಕಾಣುತ್ತಿದ್ದವು’ ಎಂದು ಸ್ಮರಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘1979ರಲ್ಲಿ ಬಂಡಾಯ ಸಾಹಿತ್ಯ ಜನ್ಮ ತಾಳಿದ ದಿನಗಳಿಂದಲೂ ತಮ್ಮ ಮತ್ತು ಚಂಪಾ ಒಡನಾಟ ಇತ್ತು. ಕಳೆದ ವರ್ಷದ ಸೆ.3ರಂದು ಬೆಂಗಳೂರಿನಲ್ಲಿ ಅವರು ಹಾಸಿಗೆ ಹಿಡಿದು ಮಲಗಿದ್ದನ್ನು ಕಂಡು ಕರುಳು ಕಿತ್ತು ಬಂದಂತಾಯಿತು’ ಎಂದು ಕಂಬನಿ ಮಿಡಿದರು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸಲು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆದು ಅದರ ಅನುಷ್ಠಾನದಲ್ಲಿ ಚಂಪಾ ಯಶಸ್ವಿಯಾದರು. ವರದಿ ಸಲ್ಲಿಸಿದಾಗ ಬೆಳಗಾವಿ ತಾಲ್ಲೂಕಿನ 28 ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ. ಅದಾಗಿ ಒಂದೆರಡು ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಆರಂಭಗೊಂಡವು’ ಎಂದು ಹೇಳಿದರು.

ರಮಾನಾಥ ಬನಶಂಕರಿ, ಸಿದ್ರಾಮ ತಳವಾರ, ಪಿ.ಜಿ. ಕೆಂಪನ್ನವರ, ಬಸವರಾಜ ಸುಣಗಾರ, ಡಾ.ಎಚ್.ಬಿ. ರಾಜಶೇಖರ, ಯ.ರು.ಪಾಟೀಲ, ಬಸವರಾಜ ಸುಣಗಾರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT