ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಗ್ರಾಮೀಣದಲ್ಲೊಂದು ಮಾದರಿ ಕಾಲೇಜು

ಹಸಿರು ಕ್ಯಾಂಪಸ್‌ ಹೊಂದಿರುವ ಕೆಎಲ್‌ಇ
Last Updated 18 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪಟ್ಟಣದ ಹೊರವಲಯದಲ್ಲಿರುವ ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‍ನೊಳಗೆ ಪ್ರವೇಶಿಸುತ್ತಿದ್ದಂತೆಯೇ ಹಸಿರು ಸಿರಿ ಮನಸೆಳೆಯುತ್ತದೆ. ನಗರ ಪ್ರದೇಶಗಳ ಕಾಲೇಜುಗಳಿಗೆ ಸರಿಸಾಟಿಯಾಗಿ ಗ್ರಾಮೀಣ ಭಾಗದಲ್ಲೂ ವಿದ್ಯಾರ್ಥಿಗಳಿಗೆ ಗುಣಾತ್ಮಕ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ಪಠ್ಯದೊಂದಿಗೆ ಕೌಶಲವೃದ್ಧಿಗೆ ಪೂರಕವಾದ ಹಲವು ಸಹ ಪಠ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೂ ಗುಣಾತ್ಮಕ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಆಶಯದಂತೆ ಪಟ್ಟಣದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು 2008ರಲ್ಲಿ ಸ್ಥಾಪಿಸಲಾಯಿತು. ಅವಶ್ಯ ಮೂಲಸೌಕರ್ಯಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಕರ್ನಾಟಕ, ಮಹಾರಾಷ್ಟ್ರ್ರ, ಗೋವಾ ಮತ್ತು ಗುಜರಾತ ರಾಜ್ಯಗಳು ಸೇರಿದಂತೆ 1,500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಕಲಿಕೆಗೆ ಪೂರಕವಾದ ಹಸಿರು ಕ್ಯಾಂಪಸ್‌ ಅನ್ನು ಇಲ್ಲಿ ರೂಪಿಸಲಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈ ಕಾಲೇಜಿಗೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮಾದರಿ ಎಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ನೀಡಿದೆ. ಶೈಕ್ಷಣಿಕ ಚಟುವಟಿಕೆಗಳ ಗುಣಮಟ್ಟ ಪರಿಗಣಿಸಿ ಐಎಸ್ಒ 9001:2015 ಪ್ರಮಾಣಪತ್ರ ಗಳಿಸಿದೆ.

ಕೇಂದ್ರ ವಿಜ್ಞಾನ ಮತ್ತು ಅಭಿಯಾಂತ್ರಿಕ ಸಂಶೋಧನಾ ಮಂಡಳಿಯು ಕಾಲೇಜಿನ ಪ್ರಾಧ್ಯಾಪಕರಿಗೆ ₹ 25 ಲಕ್ಷ ಸಂಶೋಧನಾ ಅನುದಾನ ನೀಡಿದೆ. ಇಲ್ಲಿನ ಪ್ರಾಧ್ಯಾಪಕರ ನವೀನ ಕಲ್ಪನೆಗಳಿಗೆ ಮತ್ತು ವಿನ್ಯಾಸಗಳಿಗೆ 10 ಹಕ್ಕುಸ್ವಾಮ್ಯಗಳು (ಪೇಟೆಂಟ್) ಬಂದಿವೆ.

ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್‌ನಿಂದಲೇ ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ದೇಶದ ವಿವಿಧ ಕಂಪನಿಗಳ ತಜ್ಞರಿಂದ ಕಾರ್ಯಾಗಾರ ಹಾಗೂ ತರಬೇತಿ ಆಯೋಜಿಸಲಾಗುತ್ತಿದೆ. ಇದರ ಫಲವಾಗಿ 155 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಫಲಿತಾಂಶದಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್‌ ಗಳಿಸಿದ್ದಾರೆ. ಗಣಿತದಲ್ಲಿ ಅನೇಕ ವಿದ್ಯಾರ್ಥಿಗಳು ಶೇ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ, ಮನ್ನಣೆ ಪಡೆದಿವೆ. ಐದು ವರ್ಷಗಳಿಂದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ‘ಉತ್ತಮ ಯೋಜನೆ’ ಪ್ರಶಸ್ತಿ, ಮೆಕ್ ಕಫೆ, ಹ್ಯಾಕಥಾನ್ ಪ್ರಾಯೋಜಕತ್ವಕ್ಕೆ ಆಯ್ಕೆಯಾಗಿವೆ ಎನ್ನುತ್ತಾರೆ ಪ್ರಾಂಶುಪಾಲ ಡಾ.ಪ್ರಸಾದ ರಾಂಪೂರೆ.

ಮಳೆ ನೀರು ಸಂಗ್ರಹ ವ್ಯವಸ್ಥೆ, ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗಿದೆ. ಬಳಕೆಯಾದ ನೀರನ್ನು ಸಂಸ್ಕರಿಸಿ ಉದ್ಯಾನಕ್ಕೆ ಮರು ಬಳಸಲಾಗುತ್ತಿದೆ. ಎಐಸಿಟಿಇಯುನಿಂದ ಕ್ಲೀನ್ ಕ್ಯಾಂಪಸ್ ಪ್ರಶಸ್ತಿ ಪಡೆದಿದೆ. ಇನ್ಕ್ಯುಬೇಷನ್‌ ಕೇಂದ್ರ ಮತ್ತು ರೋಬೊಟಿಕ್ಸ್ ಪ್ರಯೋಗಾಲಯ ಸ್ಥಾಪಿಸಲಾಗಿದೆ.

ಕಾಲೇಜಿನ ವಿದ್ಯಾರ್ಥಿಗಳು ರೋಪ್‌ಜಂಪ್, ಕುಸ್ತಿ, ಟೇಕ್ವಾಂಡೊ, ನೆಟ್‌ಬಾಲ್‌, ಓಟ, ಕಬಡ್ಡಿಯಲ್ಲಿ ವಿಟಿಯು ಬ್ಲ್ಯೂ ಆಗಿ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT