ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಭವನದ ಎದುರು ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿಕೆ
Last Updated 24 ಸೆಪ್ಟೆಂಬರ್ 2019, 13:44 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯಕ್ಕೆ ₹ 25ಸಾವಿರ ಕೋಟಿ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಂಸತ್‌ ಭವನದ ಎದುರು ಪ್ರತಿಭಟಿಸಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿರು.

‘ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ (ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ) ಹಣ ಕೊಟ್ಟಿದೆ. ಆದರೆ, ಬಿಜೆಪಿಯವರು ನಯಾಪೈಸೆಯನ್ನೂ ಕೊಟ್ಟಿಲ್ಲ. ಕೇಂದ್ರ ಸಚಿವರು ಬಂದು ಹೋದರೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇಂಥ ಕ್ರೂರ ಸರ್ಕಾರವನ್ನು ನೋಡಿಲ್ಲ’ ಎಂದರು.

‘ಸಂಸದರ ಬಾಯಿಗಳಿಗೆ ಬೀಗ ಹಾಕಿರುವವರಾರು, ಕೇಂದ್ರ ಸಚಿವರಿಗೆ ಮಾನ-ಮರ್ಯಾದೆ ಇದೆಯೇ, ಸಂತ್ರಸ್ತರ ಪರವಾಗಿ ಅವರು ದನಿ ಎತ್ತಿದ್ದಾರೆಯೇ, ಕೇಂದ್ರದಿಂದ ಹಣ ತರುತ್ತೇವೆ ಎನ್ನಲೂ ತಾಕತ್ತಿಲ್ಲದ ಸಂಸದರನ್ನು ಇಟ್ಟುಕೊಂಡು ಏನು ಮಾಡುವುದು?’ ಎಂದು ಕೇಳಿದರು.

ಉಪ ಚುನಾವಣೆಯಲ್ಲಿ ಉತ್ತರ ಕೊಡಿ:

‘ಸರ್ವ ಪಕ್ಷ ಸಭೆ ನಡೆಸಿ, ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ಕಾಳಜಿಯನ್ನೂ ಮುಖ್ಯಮಂತ್ರಿ ತೋರಿಲ್ಲ. ರಾಜ್ಯ ಸರ್ಕಾರ ಬದುಕಿದೆಯೇ’ ಎಂದು ಪ್ರಶ್ನಿಸಿದರು.

‘ಜುಜುಬಿ ₹ 1ಸಾವಿರ ಕೋಟಿಯಿಂದ ಸಂತ್ರಸ್ತರಿಗೆ ನೆರವಾಗಲು ಆಗುವುದಿಲ್ಲ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ, ಕೇಂದ್ರ ಸಹಾಯ ಮಾಡಲೇಬೇಕಾಗುತ್ತದೆ. ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಈ ಸರ್ಕಾರದ ವಿರುದ್ಧ ಉಪ ಚುನಾವಣೆಯಲ್ಲಿ ಜನರು ಸರಿಯಾದ ಉತ್ತರ ಕೊಡಬೇಕು’ ಎಂದು ಕೋರಿದರು.

ಅಯ್ಯಯ್ಯ‍ಪ್ಪೋ ಆಗಿದ್ದಾರೆ:

ಮುಖಂಡ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ನೆರೆಯಿಂದಾಗಿ 2 ಕೋಟಿ ಜನ ಕಂಗಾಲಾಗಿದ್ದಾರೆ. ಆದರೆ ರಾಜ್ಯವಾಗಲೀ, ಕೇಂದ್ರವಾಗಲೀ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪ ಅಯ್ಯಯ್ಯಪ್ಪೋ ಆಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಲಕ್ಷ್ಮಿಯರಿದ್ದರು. ಈಗ, ವಿಧಾನಸೌಧದಲ್ಲಿ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ’ ಎಂದು ಟೀಕಿಸಿದರು.

ಮುಖಂಡ ಈಶ್ವರ ಖಂಡ್ರೆ ಮಾತನಾಡಿ, ‘ಬಿಜೆಪಿ ಸರ್ಕಾರವು ರೈತರು ಹಾಗೂ ಜನ ವಿರೋಧಿಯಾಗಿದೆ. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ ಹೊರತು ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುತ್ತಿಲ್ಲ’ ಎಂದು ಆರೋಪಿಸಿದರು.

ಸಂಸದನೋ, ರಾಕ್ಷಸನೋ?:

‘ಕೇಂದ್ರದ ಪರಿಹಾರ ಅಗತ್ಯವಿಲ್ಲ ಎನ್ನುವ ಸಂಸದ ತೇಜಸ್ವಿ ಸೂರ್ಯ ಸಂಸದನಾ, ರಾಕ್ಷಸನಾ, ಇಂಥವರನ್ನು ಗಡಿಪಾರು ಮಾಡಬೇಕಲ್ಲವೇ? ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಮುಖಂಡ ಎಂ.ಬಿ. ಪಾಟೀಲ ಮಾತನಾಡಿ, ‘ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಬೇಕು’ ಎಂದು ಒತ್ತಾಯಿಸಿದರು.

ಪಾದಯಾತ್ರೆ:

ಜಮಖಂಡಿಯಿಂದ ಬೆಳಗಾವಿಗೆ ಪಾದಯಾತ್ರೆ ನಡೆಸಿದ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ‘25 ಸಂಸದರನ್ನು ನೀಡಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ದೊಡ್ಡ ಚಳವಳಿ ರೂಪಿಸಬೇಕು’ ಎಂದರು.

ಶಾಸಕ ಸತೀಶ ಜಾರಕಿಹೊಳಿ, ‘ಮುಖ್ಯಮಂತ್ರಿ ಇನ್ನಾದರೂ ರಾಜಕೀಯ ಬಿಟ್ಟು ಸಂತ್ರಸ್ತರಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ತೇಜಸ್ವಿ ಕ್ಷಮೆ ಯಾಚಿಸಬೇಕು:

ಮುಖಂಡ ಎಚ್.ಕೆ. ಪಾಟೀಲ, ‘ಸಂಸದ ತೇಜಸ್ವಿ ಸೂರ್ಯ ನೆರೆ ಸಂತ್ರಸ್ತರಿಗೆ ಅವಮಾನ ಮಾಡಿದ್ದಾರೆ. ನೋವು ಕೊಟ್ಟಿದ್ದಾರೆ. ಅವರಿಗೆ ತಲೆ ಕೆಟ್ಟಿದೆ ಎನ್ನುವುದೋ, ಸೊಕ್ಕು ಎನ್ನೋಣವೋ? ಅವರು ತಪ್ಪು ತಿದ್ದುಕೊಳ್ಳಬೇಕೆಂದರೆ, ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು’ ಎಂದರು.

ಮುಖಂಡರಾದ ಡಾ.ಎಚ್.ಸಿ. ಮಹಾದೇವಪ್ಪ, ವೀಣಾ ಕಾಶಪ್ಪನವರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT