ಬೆಳಗಾವಿ: ಆಯುಷ್ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ನೀಡುವ ಆಯುಷ್ ಔಷಧಿ ಕಿಟ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲಿನ ಪ್ರವಾಸಿಮಂದಿರದ ಆವರಣದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.
‘ಆಯುಷ್ ಇಲಾಖೆಯ ಮಾರ್ಗಸೂಚಿಯಗಳ ಅನ್ವಯ ಸೌಮ್ಯ ಮತ್ತು ಸಾಧಾರಣ ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ಈ ಕಿಟ್ ತಯಾರಿಸಲಾಗಿದೆ. ಈ ಕಿಟ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನೀಡಲಾಗುವುದು. ಇದರಲ್ಲಿರುವ ಔಷಧಿಗಳು ಸೋಂಕಿನ ತೀವ್ರತೆ ಕಡಿಮೆಗೊಳಿಸುವ ಜೊತೆಗೆ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಕೊರೊನಾ ನಂತರದಲ್ಲಿ ಬರುವ ಆಯಾಸ ಹಾಗೂ ಇನ್ನಿತರ ತೊಂದರೆಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ’ ಎಂದರು.
‘64 ಮಾತ್ರೆಗಳು, ಅಶ್ವಗಂಧ ಚೂರ್ಣ, ಚವನ್ ಪ್ರಾಶ್ ಮತ್ತು ಪುಷ್ಟಿದಾಯಕ ಶರಬತ್-ಇ ಉನ್ನಾಬ್ ಶಿರಪ್ ಒಳಗೊಂಡಿದೆ. ಎಲ್ಲ ತಾಲ್ಲೂಕಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಉಚಿತವಾಗಿ ಒದಗಿಸಲಾಗುವುದು. ಆಯುಷ್ ಕಿಟ್‌ನಲ್ಲಿ ಬರುವ ಎಲ್ಲಾ ಔಷಧಿಗಳು ಸುರಕ್ಷಿತವಾಗಿರುತ್ತವೆ. ಯಾವುದೇ ಅಡ್ಡಪರಿಣಾಮ ಇರುವುದಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಎಚ್.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಐ.ಸಿ.ಎಂ.ಆರ್(ಆಯುಷ್) ಸಂಶೋಧನಾಧಿಕಾರಿ ಡಾ.ಚಂದ್ರಶೇಖರ ಸಿದ್ದಾಪೂರ ಇದ್ದರು.