ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 3ನೇ ಅಲೆ: ಮಕ್ಕಳ ಚಿಕಿತ್ಸೆಗೆ ಸಿದ್ಧತೆ -ಕಾರಜೋಳ ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ
Last Updated 22 ಜೂನ್ 2021, 13:56 IST
ಅಕ್ಷರ ಗಾತ್ರ

ಬೆಳಗಾವಿ: ‘ಸಂಭವನೀಯ ಕೋವಿಡ್ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ವರದಿಗಳಿವೆ. ಆದ್ದರಿಂದ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕು ಆಸ್ಪತ್ರೆಗಳಲ್ಲೂ ಮಕ್ಕಳ ವೈದ್ಯರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ತಜ್ಞರನ್ನು ನೇಮಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳಬೇಕು. ಔಷಧಿಗಳ ಕೊರತೆ ಉಂಟಾಗಬಾರದು. ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ಏನೇ ಕೊರತೆ ಇದ್ದರೆ ಮುಂಚಿತವಾಗಿಯೇ ತಮ್ಮ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಮರಣ ಪ್ರಮಾಣ ಕಳವಳಕಾರಿ:‘ಕೋವಿಡ್ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ.3ರಷ್ಟಿರುವುದು ಕಳವಳಕಾರಿಯಾಗಿದೆ. ಆದ್ದರಿಂದ ಈ ಪ್ರಮಾಣ ಕಡಿಮೆಗೊಳಿಸಲು ಪ್ರಯತ್ನಿಸಬೇಕು’ ಎಂದು ತಾಕೀತು ಮಾಡಿದರು.

ಕೋವಿಡ್ ನಿರ್ವಹಣೆ ಮಾಡಿದ್ದಕ್ಕೆ ವೈದ್ಯರು, ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರು. ಬಿಮ್ಸ್ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರಾದೇಶಿಕ ಆಯುಕ್ತರನ್ನು ಶ್ಲಾಘಿಸಿದರು.

ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ‘ಬಿಮ್ಸ್‌ನಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿದ್ದವು. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಗತ್ಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಅಂತೆಯೇ ಊಟೋಪಹಾರ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಮಾಡಬೇಕಿದೆ. ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಬಿಮ್ಸ್ ಆವರಣದಲ್ಲಿ, ಸಿಲಿಂಡರ್‌ಗಳಿಗೆ ಆಮ್ಲಜನಕ ಮರುಪೂರಣ ಘಟಕ ಸ್ಥಾಪಿಸುವ ಅಗತ್ಯವಿದೆ. ಇದರಿಂದ ತುರ್ತು ಚಿಕಿತ್ಸಾ ಘಟಕದ ಸಾಮಾನ್ಯ ವಾರ್ಡ್‌ಗಳಲ್ಲಿರುವ ರೋಗಿಗಳಿಗೆ ಕೂಡ ಸಿಲಿಂಡರ್ ಮೂಲಕ ಆಮ್ಲಜನಕ ಪೂರೈಸಬಹುದು’ ಎಂದರು.

ಘಟಕ ಸ್ಥಾಪನೆಗೆ ಮಂಜೂರಾತಿ ನೀಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

₹ 800 ಕೋಟಿ ವೆಚ್ಚದ ಯೋಜನೆ
ಸಂಸದೆ ಮಂಗಲಾ ಸುರೇಶ ಅಂಗಡಿ, ‘ಬಳ್ಳಾರಿ ನಾಲಾ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಕೋರಿದರು.

‘ಬಳ್ಳಾರಿ ನಾಲಾ ಸುಧಾರಣೆಗೆ ₹ 800 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಅನುಮೋದನೆ ಪಡೆದು ಹಣ ಬಿಡುಗಡೆಗೆ ಯತ್ನಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಸೋಮವಾರ ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ. ಹೆಚ್ಚಿನ ಲಸಿಕೆ ಪೂರೈಕೆಯಾದರೆ ಇದೇ ರೀತಿ ಅಭಿಯಾನ ಮುಂದುವರಿಸಲಾಗುವುದು’ ಎಂದರು.

‘5ಕ್ಕಿಂತ ಹೆಚ್ಚು ಸೋಂಕು ಪ್ರಕರಣ ಕಂಡುಬಂದ 150 ಹಳ್ಳಿಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದರಿಂದ ಸೋಂಕು ನಿಯಂತ್ರಣ ಸಾಧ್ಯವಾಯಿತು. ಮುಂಬರುವ ದಿನಗಳಲ್ಲೂ ಕೋವಿಡ್‌ ಪರೀಕ್ಷೆ ಹೆಚ್ಚಿಸಲಾಗುವುದು. ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಶಾಸಕ ಅನಿಲ್ ಬೆನಕೆ, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಇದ್ದರು.

‘ಈವರೆಗೆ ತಿಳಿದುಬಂದಿಲ್ಲ’
‘3ನೇ ಅಲೆ ಮಕ್ಕಳಿಗೆ ಬಾಧಿಸುವ ಬಗ್ಗೆ ಖಚಿತ ಕಾರಣಗಳು ಈವರೆಗೆ ತಿಳಿದುಬಂದಿಲ್ಲ’ ಎಂದು ಬಿಮ್ಸ್ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ 268 ಹಾಸಿಗೆಗಳು ಇವೆ. ಬಿಮ್ಸ್‌ನಲ್ಲಿ ಮಕ್ಕಳ ತುರ್ತು ನಿಗಾ ಘಟಕ‌ ಕೂಡ ಆರಂಭಿಸಲಾಗಿದೆ’ ಎಂದು ಆರ್.ಸಿ.ಎಚ್. ಡಾ.ಐ.ಪಿ. ಗಡಾದ ತಿಳಿಸಿದರು.

‘ಈವರೆಗೆ 42 ಸಾವಿರ ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ. 11ಸಾವಿರ ಕ್ವಿಂಟಲ್ ದಾಸ್ತಾನಿದೆ. ಬೀಜ ಹಾಗೂ ಗೊಬ್ಬರ ಕೊರತೆಯಿಲ್ಲ. ಇತ್ತೀಚಿನ ಮಳೆಯಿಂದ ಬಳ್ಳಾರಿ‌ ನಾಲಾದ ಎರಡೂ ಬದಿಯಲ್ಲಿ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ನಾಶವಾಗಿದೆ. ನೀರು ಕಡಿಮೆಯಾದ ಬಳಿಕ ಜಂಟಿ‌ ಸಮೀಕ್ಷೆ ಮಾಡಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

‘ಈ ತಿಂಗಳಲ್ಲೇ ಆಲಮಟ್ಟಿ ಜಲಾಶಯ ಶೇ.80ರಷ್ಟು ಭರ್ತಿಯಾಗುವ ಸಾಧ್ಯತೆಗಳಿವೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ. ಪಾಟೀಲ ಹೇಳಿದರು.

ತಡವಾದ್ದರಿಂದಅನೇಕರು ತಡವಾಗಿ ಆಸ್ಪತ್ರೆಗೆ ದಾಖಲಾದುದು ಹಾಗೂ ಕಪ್ಪು ಶಿಲೀಂಧ್ರ ಸಮಸ್ಯೆಯಿಂದಾಗಿ ಕೋವಿಡ್ 2ನೇ ಅಲೆಯಲ್ಲಿ ಮರಣ ಪ್ರಮಾಣ ಸ್ವಲ್ಪಮಟ್ಟಿಗೆ ಜಾಸ್ತಿಯಾಯಿತುಎಂ.ಜಿ. ಹಿರೇಮಠಜಿಲ್ಲಾಧಿಕಾರಿಹಾಸಿಗೆಗಳಿವೆ.

***

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಸದ್ಯಕ್ಕೆ ಶೇ 3.77ರಷ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟಾರೆ 567 ಆಮ್ಲಜನಕ ಹಾಸಿಗೆಗಳಿವೆ.
-ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT