ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಎದುರು ಅಹವಾಲುಗಳ ಮೂಟೆ

ಜನರ ಸಂಕಷ್ಟಗಳಿಗೆ ಕಿವಿಯಾದ ಹಿರೇಮಠ ಅವರಿಂದ ಪರಿಹಾರದ ಭರವಸೆ
Last Updated 20 ಫೆಬ್ರುವರಿ 2021, 14:27 IST
ಅಕ್ಷರ ಗಾತ್ರ

ಬೈಲವಾಡ (ಬೆಳಗಾವಿ): ತರಾತುರಿಯಲ್ಲಿ ನಿರ್ವಹಣೆ ಕಂಡ ಚರಂಡಿಗಳು. ಸ್ವಚ್ಛತೆ ಕಂಡ ಶಾಲೆ–ವಸತಿನಿಲಯ. ರಸ್ತೆಗಳಿಗೆ ಹಾಕಿದ್ದ ಕಪ್ಪು ಮಣ್ಣಿನ ಮೇಲೆ ರಂಗೋಲಿಯ ಚಿತ್ತಾರ. ಮನೆ, ಪಿಂಚಣಿ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಹಲವರಿಂದ ಮನವಿ. ಜಿಲ್ಲಾಮಟ್ಟದ ಅಧಿಕಾರಿಗಳ ಎದುರು ಜನರಿಂದ ಅಹವಾಲುಗಳ ಮೂಟೆ. ಹಲವು ಸೌಲಭ್ಯ ವಿತರಣೆ. ನಿರ್ಗತಿಕರಿಗೆ ಆಶ್ರಯ ಮನೆ ಕಲ್ಪಿಸಿಕೊಡಲು ಎದುರಾಗಿರುವ ಜಾಗದ ಕೊರತೆ ಬಹಿರಂಗ. ನೋವುಗಳೊಂದಿಗೆ ಅನಾವರಣಗೊಂಡ ನಲಿವು.

– ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲ್ಲೂಕು ಬೈಲವಾಡದಲ್ಲಿ ಇದೇ ಮೊದಲಿಗೆ ಶನಿವಾರ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಕಂಡುಬಂದ ಪ್ರಮುಖ ಅಂಶಗಳಿವು.

ಜನರ ಅಹವಾಲುಗಳನ್ನು ಆಲಿಸುವ ಜೊತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ನಡೆದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆಯಿತು. ಪ್ರಮುಖ ಇಲಾಖೆಗಳ ಅಧಿಕಾರಿಗಳೂ ಗ್ರಾಮಕ್ಕೆ ಬಂದು ನೇರವಾಗಿ ಲಭ್ಯವಾಗಿದ್ದರಿಂದ ತಮ್ಮ ನೋವುಗಳನ್ನು ಹಂಚಿಕೊಂಡರು.

ಸಾರಿಗೆ ಬಸ್‌ನಲ್ಲಿ ಪ್ರಯಾಣ:

ಜಿಲ್ಲಾಧಿಕಾರಿಯೊಂದಿಗೆ ಸಾರಿಗೆ ಬಸ್‌ನಲ್ಲಿ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ಸಂಭ್ರಮ ಹಾಗೂ ಆತ್ಮೀಯವಾಗಿ ಆರತಿ ಬೆಳಗಿ, ವಾದ್ಯಮೇಳದೊಂದಿಗೆ ಬರ ಮಾಡಿಕೊಂಡರು. ಎರಡು ತಾಸುಗಳಿಗೂ ಹೆಚ್ಚು ಸಮಯ ಗ್ರಾಮದ ಓಣಿಗಳಲ್ಲಿ ಪ್ರದಕ್ಷಿಣೆ ಹಾಕಿದ ಜಿಲ್ಲಾಧಿಕಾರಿ, ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳಿಗೆ ಸಮಾಧಾನದಿಂದ ಕಿವಿಯಾದರು. ಖುದ್ದಾಗಿ ಡೈರಿಯಲ್ಲಿ ಬರೆದುಕೊಂಡು, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿನ ಮೂಲಸೌಕರ್ಯಗಳ ಸ್ಥಿತಿಯನ್ನು ಕಣ್ಣಾರೆ ವೀಕ್ಷಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನರಿಂದ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಸ್ವೀಕರಿಸಿ, ಕಾಲಮಿತಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಮಾಸಾಶನ, ಬಸ್ ಸೌಕರ್ಯ, ವಿದ್ಯುತ್‌, ವಸತಿ, ಪಡಿತರ ಚೀಟಿ, ಕುಡಿಯುವ ನೀರು, ಚರಂಡಿ, ಶೌಚಾಲಯ ಮೊದಲಾದವುಗಳು ಸೇರಿದಂತೆ 210ಕ್ಕೂ ಅಧಿಕ ಅಹವಾಲುಗಳನ್ನು ಗ್ರಾಮಸ್ಥರು ಸಲ್ಲಿಸಿದರು. ಅವುಗಳನ್ನು ದಾಖಲಿಸಿಕೊಂಡು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಗ್ರಾಮದ ವಿವಿಧ ಕಡೆಗಳಲ್ಲಿ ಮತ್ತು ಹೊಲಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ವಿದ್ಯುತ್ ತಂತಿಗಳುಜೋತು ಬಿದ್ದಿರುವುದರಿಂದ, ಅಪಾಯ ಎದುರಾಗಿದೆ. ಆದ್ದರಿಂದ ತಕ್ಷಣವೇ ಸರಿಪಡಿಸಿಕೊಡಬೇಕು’ ಎಂದು ಗ್ರಾಮಸ್ಥರು ಕೋರಿದರು. ‘ಈ ಸಮಸ್ಯೆಯನ್ನು ಫೆ. 28ರ ಒಳಗೆ ಸರಿಪಡಿಸಿ ವರದಿ‌ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಲವೆಡೆ ಕನಿಷ್ಠ ಮೂಲಸೌಲಭ್ಯವೂ ಇಲ್ಲದಿರುವ ಬಗ್ಗೆ ಜನರು ತಿಳಿಸಿದರು. ಅವುಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಹಿರೇಮಠ ತಾಕೀತು ಮಾಡಿದರು.

***

ಜಿಲ್ಲಾಧಿಕಾರಿ ‘ನಡೆ’

* ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ, ಪೂಜೆ.

* ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಪಿಯು ಕಾಲೇಜಿನ ಕಟ್ಟಡದ ಉದ್ಘಾಟನೆ.

* ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ, ಶಾಸಕ ಮಹಾಂತೇಶ ಕೌಜಲಗಿ ಮತ್ತು ಅಧಿಕಾರಿಗಳೊಂದಿಗೆ ಉಪಾಹಾರ ಸೇವನೆ.

* ಸಿ.ಆರ್.ಪಿ.ಎಫ್. ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಪ್ರತಿಮೆಗೆ ಮಾಲಾರ್ಪಣೆ.

* ಪರಿಶಿಷ್ಟರ ಕಾಲೊನಿಯ ಮನೆಗಳಿಗೆ ಭೇಟಿ, ಅಹವಾಲು ಆಲಿಕೆ.

* ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ.

* ಗೌಡರ ಓಣಿಯಲ್ಲಿ ಜನರ ಕುಂದುಕೊರತೆ ಆಲಿಕೆ.

* ಜಲಜೀವನ ಮಿಷನ್‌ನಲ್ಲಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಗೆ ತರಲಾಗುತ್ತಿರುವ ಬಗ್ಗೆ ಜನರಿಗೆ ಮಾಹಿತಿ.

* ಗ್ರಾಮ ಪಂಚಾಯ್ತು ಕಾರ್ಯಾಲಯಕ್ಕೆ ಭೇಟಿ, ಜನರ ಅಹವಾಲು ಸ್ವೀಕಾರ.

* ನಾಯಕರ‌ ಓಣಿಯಲ್ಲಿ ಮಳೆ ನೀರು ಹರಿಯಲು ಜಾಗ ಇಲ್ಲದಿರುವುದರಿಂದ ಆಗುತ್ತಿರುವ ಸಮಸ್ಯೆ ತಿಳಿಸಿದ ನಿವಾಸಿಗಳು.

* ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿಗಳನ್ನು ನೆಟ್ಟರು.

* ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರ, ನೂರಾರು ಮಂದಿ ತಪಾಸಣೆ.

* ಅಂಗವಿಕಲರಿಗೆ ತ್ರಿಚಕ್ರವಾಹನಗಳ ವಿತರಣೆ.

* ‘ಸ್ವಾಮಿತ್ವ’ ಯೋಜನೆಯಲ್ಲಿ ಡ್ರೋಣ್ ಮೂಲಕ ಆಸ್ತಿಗಳ ಸಮೀಕ್ಷೆಗೆ ಚಾಲನೆ.

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಐವರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ.

* ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮಕ್ಕೆ ಚಾಲನೆ.

* 30 ಕುಟುಂಬಗಳಿಗೆ ಭಾಗ್ಯಲಕ್ಷ್ಮಿ ಬಾಂಡ್‌ಗಳ ವಿತರಣೆ.

* ಕೃಷಿ, ತೋಟಗಾರಿಕೆ ಇಲಾಖೆಯಿಂದಲೂ ಸೌಲಭ್ಯಗಳ ವಿತರಣೆ.

* ಮಧ್ಯಾಹ್ನ ಗ್ರಾಮದಲ್ಲೇ ಸಿಹಿ ಭೋಜನ.

* ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ. ಉತ್ತಮ ಭವಿಷ‌್ಯ ರೂಪಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪರಿಹಾರದ ಭರವಸೆ.

* ಮಕ್ಕಳು ಹಾಗೂ ಸ್ಥಳೀಯರು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ. ಹಾಡಿದ ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT