ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪರೀಕ್ಷೆ ರದ್ದತಿಗೆ ಆಗ್ರಹಿಸಿ ‍ಪ್ರತಿಭಟನೆ

Last Updated 22 ಜುಲೈ 2021, 16:42 IST
ಅಕ್ಷರ ಗಾತ್ರ

ಬೆಳಗಾವಿ: ‘ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಪರೀಕ್ಷೆ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಆರ್‌ಎಲ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ರಾಜು ಗಾಣಗಿ, ‘ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ತೀವ್ರತೆ ಹೆಚ್ಚಾಗಿ, ಲಾಕ್‌ಡೌನ್‌ ಆಗಿದ್ದ ಸಮಯದಲ್ಲಿ ಹಿಂದಿನ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ನಡೆಸದೆ ಎಲ್ಲರಿಗೂ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಲಾಯಿತು. 2 ತಿಂಗಳಿನಿಂದ ಆನ್‌ಲೈನ್‌ ತರಗತಿಗಳು ಸಹ ನಡೆಯುತ್ತಿವೆ. ಈಗ ದಿಢೀರನೆ ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಯನ್ನು ಜುಲೈ ಕೊನೆ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಟೆಂಬರ್ ಒಳಗೆ ಪ್ರಸ್ತುತ ಸೆಮಿಸ್ಟರ್ ಪರೀಕ್ಷೆಯನ್ನೂ ಮುಗಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ಆಘಾತ ನೀಡಿದೆ’ ಎಂದು ತಿಳಿಸಿದರು.

‘ಎಐಡಿಎಸ್‌ಒ ನಡೆಸಿದ ಸಮೀಕ್ಷೆಯಲ್ಲಿ, ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಕೈಬಿಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

‘ಜುಲೈ, ಆಗಸ್ಟ್ ತಿಂಗಳಲ್ಲಿ ಕೋವಿಡ್ 3ನೇ ಅಲೆ ಭೀಕರವಾಗಿ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಿರುವಾಗ ತಿಂಗಳಲ್ಲಿ 2 ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದು ಅವಾಸ್ತವ. ಅದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಅಧಿಕ ದೈಹಿಕ ಹಾಗೂ ಮಾನಸಿಕ ಒತ್ತಡವನ್ನೂ ಸೃಷ್ಟಿಸುತ್ತದೆ. ಅತಿ ಕಡಿಮೆ ಸಮಯದಲ್ಲಿ 2 ಸೆಮಿಸ್ಟರ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸಬೇಕೆಂದರೆ ಗುಣಮಟ್ಟದ ಶಿಕ್ಷಣ, ಕಲಿಕೆ, ಜ್ಞಾನಾರ್ಜನೆಗೆ
ಮಾರಕವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು ಹಾಗೂ ರಾಜ್ಯದ ಜನತೆಯ ಜೀವ ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಪರೀಕ್ಷೆ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕೋವಿಡ್ ಲಸಿಕೆಯ 2 ಡೋಸ್‌ಗಳನ್ನು ಉಚಿತವಾಗಿ ನೀಡಿದ ನಂತರವೆ ಆಫ್‌ಲೈನ್ ತರಗತಿಗಳು ಹಾಗೂ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿಗಳಾದ ವೈಭವ ಸುತಾರ, ವಿನಾಯಕ, ಪ್ರವೀಣ, ವೈಭವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT