ಮೋದಿ, ಶಾ, ಬಿಎಸ್‌ವೈ ಪ್ರತಿಕೃತಿಗಳಿಗೆ ಬೆಂಕಿ

7
ಮಹದಾಯಿ ವಿವಾದ ಬಗೆಹರಿಸದಿರುವುದಕ್ಕೆ ಜೆಡಿಎಸ್‌ ಆಕ್ರೋಶ

ಮೋದಿ, ಶಾ, ಬಿಎಸ್‌ವೈ ಪ್ರತಿಕೃತಿಗಳಿಗೆ ಬೆಂಕಿ

Published:
Updated:

ಬೆಳಗಾವಿ: ‘ಮಹದಾಯಿ ಹಾಗೂ ಕಳಸಾ–ಬಂಡೂರಿ ವಿವಾದ ಬಗೆಹರಿಸುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುವರ್ಣ ವಿಧಾನಸೌಧದಿಂದ ಪಾದಯಾತ್ರೆ ಆರಂಭಿಸಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಆಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕೃತಿಗಳ ಅಣಕು ಶವಯಾತ್ರೆ ನಡೆಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮೂರು ಪ್ರತಿಕೃತಿಗಳಿಗೂ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದರು. ‘ಬಿಜೆಪಿ ಹಟಾವೋ, ದೇಶ ಬಚಾವೋ’ ಘೋಷಣೆ ಕೂಗಿದರು.

‘ವಿವಾದವನ್ನು ಒಂದು ತಿಂಗಳಲ್ಲಿ ಬಗೆಹರಿಸಲಾಗುವುದು. ಈ ಭಾಗದ ಜನರಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಈ ಅಂತರರಾಜ್ಯ ವಿವಾದ ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಕ್ರಮ ವಹಿಸದೇ ಬಿಜೆಪಿ ನಾಯಕರು ವಚನಭ್ರಷ್ಟರಾಗಿದ್ದಾರೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ದೂರಿದರು.

‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಮಹದಾಯಿ ವಿವಾದವನ್ನು ಕೂಡಲೇ ಬಗೆಹರಿಸುವಂತೆ ರಾಷ್ಟ್ರಪತಿಗಳು ಪ್ರಧಾನಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿದರು.

‘ಕೇಂದ್ರವು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಶಿವನಗೌಡ ಪಾಟೀಲ, ನಾಸಿರ್ ಬಾಗವಾನ್, ಪ್ರಭುಗೌಡ ಪಾಟೀಲ, ರಾಜೇಂದ್ರ ಐಹೊಳೆ, ಪ್ರಮೋದ ಪಾಟೀಲ, ಶ್ರೀಶೈಲ ಫಡಗಲ್, ಚನ್ನಪ್ಪ ವಗ್ಗನ್ನವರ, ರಿಯಾಜ್ ಪಠಾದ, ಜಿ.ಎಸ್. ಗೋಕಾಕ, ಪ್ರಕಾಶ ಸೋನವಾಲ್ಕರ, ಸುಮನ್ ಸೋನಾವಾನೆ, ಸುನೀತಾ ಹೊನಕಾಂಬಳೆ, ಶಾರದಾ ಡವಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !