ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಉಪಚುನಾವಣೆ; ಗರಿಗೆದರಿದ ರಾಜಕೀಯ ಚಟುವಟಿಕೆ

Last Updated 21 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಗೋಕಾಕ, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್‌ 21ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮ ಮುಖಂಡರ ಮೂಲಕ ಲಾಬಿ ನಡೆಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅನರ್ಹರಾಗಿರುವ ಈ ಕ್ಷೇತ್ರಗಳ ಶಾಸಕರ ಹಣೆಬರಹ ಸುಪ್ರೀಂ ಕೋರ್ಟ್‌ನಲ್ಲಿ ಏನಾಗಲಿದೆ ಎನ್ನುವುದನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈಗ ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ.

ಮತ್ತೆ ಕೋರ್ಟ್‌ ಮೆಟ್ಟಿಲು

‘ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶವನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಮನವಿ ಇತ್ಯರ್ಥವಾಗುವವರೆಗೆ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕೆಂದು ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ನೋಡಿಕೊಂಡು ಪಕ್ಷದ ವರಿಷ್ಠರು ಮುಂದಿನ ಹೆಜ್ಜೆ ಇಡಲಿದ್ದಾರೆ’ ಎಂದು ಬಿಜೆಪಿ ಬೆಳಗಾವಿ ವಿಭಾಗದ ಉಸ್ತುವಾರಿ ಈರಣ್ಣಾ ಕಡಾಡಿ ತಿಳಿಸಿದರು.

ಪ್ರಮುಖರ ಹೆಸರುಗಳು ಚಾಲ್ತಿಯಲ್ಲಿ

ಗೋಕಾಕ ಕ್ಷೇತ್ರದಿಂದ ಕಾಂಗ್ರೆಸ್‌ನ ಲಖನ್‌ ಜಾರಕಿಹೊಳಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವರ ಸೋದರ, ಶಾಸಕ ಸತೀಶ ಜಾರಕಿಹೊಳಿ ಈ ಕುರಿತು ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಇವರನ್ನು ಎದುರಿಸಲು ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ರಮೇಶ ಅವರ ಅನರ್ಹತೆ ಪ್ರಕರಣವು ಶೀಘ್ರದಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದಿದ್ದರೆ, ಅವರ ಬದಲಾಗಿ ಯಾರನ್ನು ಕಣಕ್ಕಿಳಿಸಿದರೆ ಒಳಿತಾಗಬಹುದು. ಕಳೆದ ಚುನಾವಣೆಯಲ್ಲಿ ಪರಾಜಿತಗೊಂಡ ಅಶೋಕ ಪೂಜಾರಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ.

‘ಗೋಕಾಕದಲ್ಲಿರುವ ದುರಾಡಳಿತದ ವಿರುದ್ಧ ನಾವು ನಡೆಸುತ್ತಿರುವ ಹೋರಾಟವನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ರಮೇಶ ಅವರನ್ನು ಪಕ್ಷಕ್ಕೆ ಸೇರ್ಪಡಿಸಿಕೊಳ್ಳುವುದರ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಚುನಾವಣೆಗೆ ಸ್ಪರ್ಧಿಸಬೇಕೇ, ಬೇಡವೇ ಎನ್ನುವುದರ ಬಗ್ಗೆ ಮತದಾರರು ಹಾಗೂ ಹಿತೈಷಿಗಳ ಬಗ್ಗೆ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ’ ಎಂದು ಅಶೋಕ ಪೂಜಾರಿ ತಿಳಿಸಿದರು.

ಅಥಣಿಯ ಮಹೇಶ ಕುಮಠಳ್ಳಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದರಿಂದ, ಸಚಿವ ಲಕ್ಷ್ಮಣ ಸವದಿ ಅವರಿಗೆ ದಾರಿ ಸುಗಮವಾಗಲಿದೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸವದಿ ಸೋಲುಂಡಿದ್ದರು. ಈ ಸಲ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇವರನ್ನು ಸಮರ್ಥವಾಗಿ ಎದುರಿಸಬಲ್ಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್‌ ಇದೆ.

ಕಾಗವಾಡದ ಟಿಕೆಟ್‌ ಅನ್ನು ತಮ್ಮ ಮಗ ಶ್ರೀನಿವಾಸ ಪಾಟೀಲಗೆ ನೀಡಬೇಕು ಎಂದು ಶ್ರೀಮಂತ ಪಾಟೀಲ ಅವರು ಬಿಜೆಪಿ ವರಿಷ್ಠರಲ್ಲಿ ಬೇಡಿಕೆ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಕಳೆದ ಚುನಾವಣೆಯಲ್ಲಿ ಪರಾಜಿತಗೊಂಡ ರಾಜು ಕಾಗೆ ಕೂಡ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದಾರೆ. ಅಂತಿಮ ಕ್ಷಣದಲ್ಲಿ ಪಕ್ಷವು ಯಾರಿಗೆ ಬಿ ಫಾರಂ ನೀಡುತ್ತದೆಯೋ ಕಾದು ನೋಡಬೇಕಾಗಿದೆ. ಕಾಂಗ್ರೆಸ್‌ ಪಾಳಯದಲ್ಲಿ ಪ್ರಕಾಶ ಹುಕ್ಕೇರಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಜೆಡಿಎಸ್‌ ಸ್ಪರ್ಧೆ: ‘ಜಿಲ್ಲೆಯ ಎಲ್ಲ ಮೂರೂ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ಪಕ್ಷದ ವರಿಷ್ಠರು ಆಕಾಂಕ್ಷಿಗಳ ಪಟ್ಟಿಯನ್ನು ತರಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಬಹುದು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT