ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಕಾಳಜಿಗೆ ‘ಸ್ವಚ್ಛ ಮೇವ ಜಯತೇ’

ಜಿಲ್ಲಾ ಪಂಚಾಯ್ತಿಯಿಂದ ಅಭಿಯಾನ; 11ರಿಂದ ಆರಂಭ
Last Updated 4 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಪರಿಣಾಮಕಾರಿಯಾಗಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿಯು ಜೂನ್‌ 11ರಿಂದ ‘ಸ್ವಚ್ಛ ಮೇವ ಜಯತೇ’ ಎನ್ನುವ ಅಭಿಯಾನವನ್ನು ಆರಂಭಿಸಲಿದೆ.

506 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜೂನ್ 11ರಂದು ಒಂದೇ ದಿನ ತಲಾ 500 ಸಸಿಗಳನ್ನಾದರೂ ನೆಡಬೇಕು ಎನ್ನುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಪಂಚಾಯ್ತಿ ಸಿಬ್ಬಂದಿಯು ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರನ್ನು ಬಳಸಿಕೊಳ್ಳಲಾಗುತ್ತಿದೆ. ಆ ಭಾಗದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಹಿರಿಯರನ್ನು ಕಾರ್ಯಕ್ರಮದಲ್ಲಿ ಒಳಗೊಳಿಸಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯವರು ಸಾಮಾಜಿಕ ಅರಣ್ಯ ಯೋಜನೆಯಡಿ ರಸ್ತೆ ಬದಿಗಳಲ್ಲಿ ಗುಂಡಿಗಳನ್ನು ತೋಡುವ ಕೆಲಸ ಆರಂಭಿಸಿದ್ದಾರೆ. ಅವರ ಸಹಕಾರವನ್ನೂ ಅಭಿಯಾನದಲ್ಲಿ ಪಡೆದುಕೊಳ್ಳಲಾಗುತ್ತಿದೆ.

ಉಳಿಸಿಕೊಳ್ಳುವುದಕ್ಕೂ ಒತ್ತು

ಸಸಿಗಳನ್ನು ನೆಡುವುದು ಮಾತ್ರವಲ್ಲದೇ, ಉಳಿಸಿಕೊಳ್ಳುವ ನಿಟ್ಟಿನಲ್ಲೂ ಒತ್ತು ನೀಡಬೇಕು. ಈಗಾಗಲೇ ನೆಡಲಾಗಿರುವ ಸಸಿಗಳನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ನೀರುಣಿಸುವ ಮೂಲಕ ಕಾಪಾಡಿಕೊಳ್ಳಬೇಕು ಎಂದು ಸೂಚನೆಯನ್ನೂ ಪಂಚಾಯ್ತಿಗಳಿಗೆ ನೀಡಲಾಗಿದೆ. ಈ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತದೆ. ಹೀಗಾಗಿ, ಈ ಅವಧಿಯಲ್ಲಿ ಸಸಿಗಳನ್ನು ನೆಟ್ಟರೆ ‘ಬದುಕುಳಿಯುವ ಪ್ರಮಾಣ’ದ ಸಮಾಧಾನಕರ ರೀತಿಯಲ್ಲಿರುತ್ತದೆ ಎಂಬ ನಿರೀಕ್ಷೆ ಅಧಿಕಾರಿಗಳದಾಗಿದೆ.

‘ಪರಿಸರ ಸಂರಕ್ಷಣೆಯಲ್ಲಿ ಸ್ವಚ್ಛತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ, ಸ್ವಚ್ಛ ಮೇವ ಜಯತೇ ಅಭಿಯಾನವನ್ನು ಸರ್ಕಾರ ರೂಪಿಸಿದೆ. ಮುಖ್ಯವಾಗಿ ಜೂನ್‌ 11ರಂದು ಒಂದೇ ದಿನ ಕನಿಷ್ಠ 1 ಲಕ್ಷ ಸಸಿಗಳನ್ನು ನೆಡುವ ಉದ್ದೇಶವಿದೆ. ಹಣ್ಣು ನೀಡುವ ಮರಗಳಾಗಬಲ್ಲ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಎಲ್ಲೆಲ್ಲಿ ಸಾರ್ವಜನಿಕ ಸ್ಥಳಗಳು ಲಭ್ಯವಿದೆಯೋ ಅಲ್ಲಿ ನಾಟಿ ಮಾಡಲಾಗುವುದು. ಅವುಗಳನ್ನು ಕಾಪಾಡಿಕೊಳ್ಳುವುದಕ್ಕೂ ಯೋಜಿತವಾಗಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಸ್ಟಿಕ್ ಬಳಕೆ ಪ್ರಮಾಣ ತಗ್ಗಿಸಲು

‘ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಅಭಿಯಾನದಲ್ಲಿ ಈ ವಿಷಯವನ್ನೂ ಹೈಲೈಟ್ ಮಾಡಲಾಗುವುದು. ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಿದರೆ ಅವರು ಪೋಷಕರಿಗೂ ತಿಳಿಸುತ್ತಾರೆ. ಹೀಗಾಗಿ, ಅವರಿಗೆ ಪ್ರಬಂಧ, ಚಿತ್ರ ಬಿಡಿಸುವ ಸ್ಪರ್ಧೆ ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಿಗೆ ಕಾಗದ ಅಥವಾ ಬಟ್ಟೆಯಿಂದ ಸಿದ್ಧಪಡಿಸಿದ ಬ್ಯಾಗ್‌ಗಳನ್ನು ಬಳಸುವಂತೆ ಜಾಗೃತಿ ಮೂಡಿಸಬೇಕಾಗಿದೆ. ಇದಕ್ಕಾಗಿ ಸ್ವಸಹಾಯ ಸಂಘಗಳು ಮುಂದೆ ಬಂದರೆ ಅವರಿಗೆ ಹಳ್ಳಿಗಳಲ್ಲಿ ತಮ್ಮ ಪರಿಸರ ಸ್ನೇಹಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು. ಅವರಿಂದ ಬಟ್ಟೆ ಅಥವಾ ಕಾಗದದ ಚೀಲಗಳನ್ನು ಖರೀದಿಸಲಾಗುವುದು. ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ‍ಪಂಚಾಯ್ತಿ ಸೇರಿದಂತೆ ಎಲ್ಲ ಸರ್ಕಾರಿ ಸಭೆ, ಸಮಾರಂಭಗಳಲ್ಲೂ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ನಿರ್ಬಂಧಿಸಲಾಗಿದೆ. ಕಾಗದದ ಲೋಟಗಳ ಬಳಕೆಗೆ ಒತ್ತು ನೀಡಲಾಗಿದೆ’ ಎನ್ನುತ್ತಾರೆ ಅವರು.

ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ಬಳಕೆಯ ಮಹತ್ವದ ಬಗ್ಗೆಯೂ ಅಭಿಯಾನದಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT