‘ಅಕ್ಟೋಬರ್‌ನಲ್ಲಿ ಬೆಳಗಾವಿಯಿಂದಲೂ ಉಡಾನ್’

7
ಬೆಳಗಾವಿ ನಿಯೋಗಕ್ಕೆ ಸಚಿವರ ಭರವಸೆ

‘ಅಕ್ಟೋಬರ್‌ನಲ್ಲಿ ಬೆಳಗಾವಿಯಿಂದಲೂ ಉಡಾನ್’

Published:
Updated:
Deccan Herald

ಬೆಳಗಾವಿ: ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಕಲ್ಪಿಸುವ ‘ಉಡಾನ್‌’ ಯೋಜನೆಯನ್ನು ಬೆಳಗಾವಿಗೂ ವಿಸ್ತರಿಸುವಂತೆ ಆಗ್ರಹಿಸಿ, ಇಲ್ಲಿನ ಜನಪ್ರತಿನಿಧಿಗಳ ನಿಯೋಗ ಕೇಂದ್ರ ವಿಮಾನಯಾನ ಸಚಿವ ಜಯಂತ ಸಿನ್ಹಾ ಅವರಿಗೆ ನವದೆಹಲಿಯಲ್ಲಿ ಬುಧವಾರ ಮನವಿ ಸಲ್ಲಿಸಿದೆ.

ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಒಳಗೊಂಡ ನಿಯೋಗವು, ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರೊಂದಿಗೆ ಚರ್ಚಿಸಿದೆ.

‘ಸಾಂಬ್ರಾ ವಿಮಾನನಿಲ್ದಾಣದಿಂದ ಬೆಂಗಳೂರು, ಮುಂಬೈಗೆ ರದ್ದಾಗಿರುವ ಎಲ್ಲ ವಿಮಾನಗಳನ್ನು ಪುನರಾರಂಭಿಸಬೇಕು. ಬೋಯಿಂಗ್ ವಿಮಾನ ಸೇವೆ ಆರಂಭಿಸಬೇಕು’ ಎಂದು ಒತ್ತಾಯಿಸಿದೆ.

ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ‘ಐತಿಹಾಸಿಕ ನಗರವಾದ ಬೆಳಗಾವಿಯಲ್ಲಿ ಎಂಎಲ್‌ಐಆರ್‌ಸಿ, ಏರ್‌ಫೋರ್ಸ್‌ ವಿಂಗ್‌ನಂತಹ ಮಹತ್ವದ ಕೇಂದ್ರಗಳಿವೆ. ಅಕ್ಟೋಬರ್‌ನಲ್ಲಿ ಬೆಳಗಾವಿ ವಿಮಾನನಿಲ್ದಾಣವನ್ನು ಉಡಾನ್ ಸೇವೆಗೆ ಸೇರಿಸುವ ಜೊತೆಗೆ ಮುಂಬೈ ಮತ್ತು ಬೆಂಗಳೂರಿಗೆ ಹೊಸ ವಿಮಾನಗಳ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೆಳಗಾವಿ ಕಡೆಗಣಿಸುವುದಿಲ್ಲವೆಂದು ಭರವಸೆ ನೀಡಿದ್ದಾರೆ’ ಎಂದು ಅಭಯ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬೆಳಗಾವಿ ಪರಿಸರದಲ್ಲಿ ತರಕಾರಿ, ಹೂ, ಹಣ್ಣು ಹಾಗೂ ಇತರ ಕೃಷಿ ಉತ್ಪನ್ನಗಳನ್ನು ಹೇರಳವಾಗಿ ಬೆಳೆಯುತ್ತಿದ್ದು, ಅವುಗಳನ್ನು ದೇಶದ ವಿವಿಧ ಮಾರುಕಟ್ಟೆಗಳಿಗೆ ಒಯ್ಯುವುದಕ್ಕೆ ಅನುಕೂಲವಾಗುವಂತೆ ಬೋಯಿಂಗ್ ವಿಮಾನ ಸೇವೆ ಅರಂಭಿಸಬೇಕು. ಇದಕ್ಕಾಗಿ ರನ್‌ವೇ ವಿಸ್ತರಣೆ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತರಲಾಗಿದೆ‌’ ಎಂದು ಮಾಹಿತಿ ನೀಡಿದ್ದಾರೆ.

ನಿಯೋಗದಲ್ಲಿ ಬೆಳಗಾವಿಯ ಉದ್ಯಮಿಗಳು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !