ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವಾಲಯದಿಂದ ಸಹಕಾರಿ ರಂಗಕ್ಕೆ ಅನುಕೂಲ: ಜಗದೀಶ ಕವಟಗಿಮಠ ವಿಶ್ವಾಸ

Last Updated 7 ಜುಲೈ 2021, 14:00 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆಂದು ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಸಹಕಾರಿ ಸಂಸ್ಥೆಗಳು, ಈ ವಲಯದ ಬ್ಯಾಂಕ್‌ಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಪಾಧ್ಯಕ್ಷ ಜಗದೀಶ ಕವಟಗಿಮಠ ವಿಶ್ವಾಸ ವ್ಯಕ್ತಪಡಿಸಿದರು.

‘ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸರ್ಕಾರ ಕ್ರಮ ವಹಿಸಿದೆ. ರಾಜ್ಯದ ಸಹಕಾರ ಭಾರತಿ ಹಾಗೂ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಪುರಸ್ಕಾರ ಸಿಕ್ಕಿರುವುದು ನಮ್ಮ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ದೇಶದಲ್ಲಿ 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. 30 ಕೋಟಿ ಸದಸ್ಯರಿದ್ದಾರೆ. ದೇಶದ ಬಹುತೇಕ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದ್ದು, ಜನರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದೆ’ ಎಂದು ಹೇಳಿದರು.

‘ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಕ್ಷೇತ್ರಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಆವಿಷ್ಕಾರ ಆಗಿಲ್ಲ. ಇದು ಸಹಕಾರಿ ರಂಗದ ಅಗತ್ಯತೆ ಮತ್ತು ಹಿರಿಮೆಯನ್ನು ತೋರಿಸುತ್ತದೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಇದುವರೆಗೂ ಇರಲಿಲ್ಲ. ದೇಶದ ಕೃಷಿ ಕ್ಷೇತ್ರ ಅತ್ಯಂತ ದೊಡ್ಡದಾಗಿರುವುದರಿಂದ ಕೃಷಿ ಸಚಿವಾಲಯವು ಸಹಕಾರಿಯತ್ತ ಗಮನಹರಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ರಚಿಸಿರುವುದು ಉತ್ತಮ ಕ್ರಮವಾಗಿದೆ’ ಎಂದರು.

‘ಈ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು-ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ. ಹೊಸ ಖಾತೆಗೆ ಸಚಿವರನ್ನು ನೇಮಿಸುವ ಸಾಧ್ಯತೆಯೂ ಇದೆ. ಇದರಿಂದ ರಂಗವು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.

ಕ.ರಾ.ಸೌ.ಸಂ.ಸ.ನಿ. ಪ್ರಾಂತೀಯ ವ್ಯವಸ್ಥಾಪಕ ಶ್ರೀಕಾಂತ ಬರುವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT