ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ವಿರುದ್ಧ ರೈತರ ಅಸಮಾಧಾನ

ಚನ್ನಮ್ಮನ ಕಿತ್ತೂರು: ಕಚೇರಿ ಎದುರು ಮತ್ತೆ ಪ್ರತಿಭಟಿಸಿದ ಸಾಗುವಳಿದಾರರು
Published 29 ಸೆಪ್ಟೆಂಬರ್ 2023, 16:26 IST
Last Updated 29 ಸೆಪ್ಟೆಂಬರ್ 2023, 16:26 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕುಲವಳ್ಳಿ ಗುಡ್ಡ ಸೇರಿ ಒಂಬತ್ತು ಹಳ್ಳಿಗಳ ಸಾಗುವಳಿದಾರರ ಸಮಸ್ಯೆ ಬಗ್ಗೆ ಉಪವಿಭಾಗಾಧಿಕಾರಿ(ಎಸಿ) ನೇತೃತ್ವದಲ್ಲಿ ಬುಧವಾರ ಸಭೆ ಕರೆದು ಉತ್ತರ ನೀಡಲಾಗುವುದೆಂದು ಕಳೆದ ಶುಕ್ರವಾರ ರೈತರಿಗೆ ತಿಳಿಸಿದ್ದ ತಹಶೀಲ್ದಾರ್ ಮಾತು ತಪ್ಪಿದ್ದು, ಇದರಿಂದ ಕೆರಳಿದ ಸಾಗುವಳಿದಾರರು ತಹಶೀಲ್ದಾರ್ ಕಚೇರಿ ಎದುರು ಬುಧವಾರ ಮತ್ತೆ ಪ್ರತಿಭಟನೆ ನಡೆಸಿದರು.

‘ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಸಮೀಕ್ಷೆ ಮಾಡಲಾಗಿರುವ ನಕ್ಷೆ ಪೂರೈಸಬೇಕು ಎಂದು ಬೇಡಿಕೆ ಮಂಡಿಸಿದ್ದೆವು. ಈ ಬೇಡಿಕೆಗೂ ಉತ್ತರಿಸುವುದಾಗಿ ತಹಶೀಲ್ದಾರ್ ರವೀಂದ್ರ ಹಾದಿಮನಿ ತಿಳಿಸಿದ್ದರು. ಆದರೆ, ಎಸಿ ಅವರು ತುರ್ತು ಸಭೆ ಇರುವುದರಿಂದ ಬರಲು ಆಗುವುದಿಲ್ಲವೆಂದು ಹೇಳುತ್ತಿದ್ದಾರೆ. ಸಾಗುವಳಿದಾರರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

‘ದಶಕಗಳಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ. ಭೂಮಿ ಹಕ್ಕು ನೀಡದಿದ್ದರೆ ನಮಗೆ ದಯಾ ಮರಣ ಕರುಣಿಸಿ, ಇಲ್ಲವೇ ವಿಷ ಕುಡಿದು ಸಾಯುತ್ತೇವೆ. ಇದನ್ನು ಬಿಟ್ಟು ಬದುಕಿಗೆ ನಮಗೆ ಬೇರೆ ದಾರಿಯಿಲ್ಲ’ ಎಂದು ಅಳಲು ತೋಡಿಕೊಂಡರು.

‘ಇದೇ ಭೂಮಿಯ ನಕ್ಷೆಯನ್ನು ಕೆಲವರಿಗೆ ತಹಶೀಲ್ದಾರ್ ಕಚೇರಿ ಪೂರೈಸಿದೆ. ನಾವು ಕೇಳಿದರೆ ಕೊಡುತ್ತಿಲ್ಲ. ನಿಜವಾಗಿ ಉಳುಮೆ ಮಾಡುತ್ತಿರುವ ರೈತರ ದಿಕ್ಕು ತಪ್ಪಿಸುವ ಕೆಲಸ ತಹಶೀಲ್ದಾರ್ ಅವರಿಂದ ನಡೆಯುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ನೀವೇ (ತಹಶೀಲ್ದಾರ್) ನಮಗೆ ಬುಧವಾರ ಕೇಳಿರುವ ಕಾಗದಪತ್ರದ ಅರ್ಜಿಗೆ ಉತ್ತರ ನೀಡುವುದಾಗಿ ಹೇಳಿದ್ದಿರಿ. ಈಗ ಬೇರೆ ಮಾತನಾಡುತ್ತಿದ್ದೀರಿ. ನೀವು ನೀಡುವ ಯಾವುದೇ ಸಮಜಾಯಿಷಿಯನ್ನು ನಾವು ಕೇಳುವುದಿಲ್ಲ. ಉಪವಿಭಾಗಾಧಿಕಾರಿ ಬರುವವರೆಗೆ ಸ್ಥಳಬಿಟ್ಟು ಕದಲುವುದಿಲ್ಲ’ ಎಂದು ರೈತರು ಪಟ್ಟು ಹಿಡಿದು ಕುಳಿತರು.

ರೈತಪರ ಹೋರಾಟಗಾರ ಪಿ.ಎಚ್. ನೀರಲಕೇರಿ ಮಾತನಾಡಿ, ‘ಸಾಗುವಳಿ ಹಕ್ಕಿಗಾಗಿ ಶಾಂತರೀತಿಯಿಂದ ಹೋರಾಟ ನಡೆಸಲು ಬಂದಿದ್ದೇವೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ಇಲ್ಲಿಯ ಸಾಗುವಳಿದಾರರ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತರಲಾಗುವುದು’ ಎಂದರು.

ರೈತ ಮುಖಂಡ ಬಿಷ್ಟಪ್ಪ ಶಿಂಧೆ ಮಾತನಾಡಿ, ‘ತಹಶೀಲ್ದಾರ್ ರೈತರಿಗೆ ಬರೀ ಸುಳ್ಳು ಹೇಳುತ್ತ ಬಂದಿದ್ದಾರೆ. ಬೇರೆಯವರಿಗೆ ಕಾಗದಪತ್ರಗಳನ್ನು ಪೂರೈಸುವ ಅವರು ನಮಗೆ ನೀಡುತ್ತಿಲ್ಲ. ನ್ಯಾಯಯುತವಾಗಿ ದಕ್ಕಬೇಕಿರುವ ಭೂಮಿ ಹಕ್ಕು ಪಡೆಯುವಲ್ಲಿ ತೊಂದರೆ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಹಶೀಲ್ದಾರ್ ನೀಡುವ ಸಮಜಾಯಿಷಿಗೆ ಬಗ್ಗದ ರೈತರು ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಅಪ್ಪೇಶ ದಳವಾಯಿ, ಅರ್ಜುನ ಮಡಿವಾಳರ, ರಾಚಯ್ಯ ಒಕ್ಕುಂದಮಠ, ಮಹಾಂತೇಶ ಎಮ್ಮಿ, ಕಾಸೀಂ ನೇಸರಗಿ, ನಾಗಪ್ಪ ಅಸಲನ್ನವರ, ಮಡಿವಾಳಪ್ಪ ವರಗಣ್ಣವರ, ಸುರೇಶ ತೋಫಗಾನಿ, ದಶರಥ ಮಡಿವಾಳರ, ಎಂ.ಎಫ್ ಜಕಾತಿ, ಕಲ್ಲಪ್ಪ ಕುಗಟಿ, ಮಹಾಂತೇಶ ರಾಹುತ, ಒಂಬತ್ತು ಹಳ್ಳಿಗಳ ಅಧಿಕ ಸಂಖ್ಯೆಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Cut-off box - ಅ. 3ಕ್ಕೆ ಪ್ರತಿಭಟನೆ ‘ಕಿತ್ತೂರು ತಹಶೀಲ್ದಾರ್ ಅವರಿಂದ ಸಮರ್ಪಕ ಸ್ಪಂದನೆ ಸಿಗದಿರುವ ಕಾರಣ ಅ. 3 ರಂದು ಬೆಳಗಾವಿ ಜಿಲ್ಲಾಧಿಕಾರಿ ಎದುರು ದನಕರು ಮಕ್ಕಳು ಮಹಿಳೆಯರು ಸೇರಿ ರೈತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ರೈತಪರ ಹೋರಾಟಗಾರ ಪಿ. ಎಚ್. ನೀರಲಕೇರಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT