ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ನೀತಿಗೆ ಖಂಡನೆ

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಯಿಂದ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2020, 11:19 IST
ಅಕ್ಷರ ಗಾತ್ರ

ಬೆಳಗಾವಿ: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುತ್ ಖಾಸಗೀಕರಣ ನೀತಿ ವಿರೋಧಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.

ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ‘ಸರ್ಕಾರದ ನೀತಿಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅನ್ನದಾತರ ವಿರೋಧಿಯಾದ ಈ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರದಿಂದ ಪೂರೈಸಿದ ಸೋಯಾಬೀನ್ ಬಿತ್ತನೆ ಬೀಜ ಕಳಪೆಯಾದ್ದರಿಂದ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ ₹ 25ಸಾವಿರ ಪರಿಹಾರ ನೀಡಬೇಕು. ಆ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದೆ ಕೃಷಿಕರಿಗೆ ಅಪಾರ ಹಾನಿಯಾಗಿದೆ. ಆದರೆ, ಜಿಲ್ಲೆಯಲ್ಲಿ 7,700 ಎಕರೆಯಲ್ಲಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ನಿಖರ ಸಮೀಕ್ಷೆಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

ಕಚೇರಿ ಸ್ಥಳಾಂತರಿಸಿ

‘ಖಾನಾಪುರ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳಿಂದ ಪ್ರತಿ ವರ್ಷ ಸಾಕಷ್ಟು ಬೆಳೆ ಹಾನಿಯಾಗುತ್ತಿದೆ. ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ವಿತರಿಸಬೇಕು. ರೈತರ ಕುಂದುಕೊರತೆಗಳನ್ನು ನಿವಾರಿಸಲು ಸಚಿವರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಹಂಗಾಮಿನ ಕಬ್ಬು ದರ ನಿಗದಿಪಡಿಸಬೇಕು. ಸುವರ್ಣ ವಿಧಾನಸೌಧಕ್ಕೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಕಬ್ಬು ಆಯುಕ್ತರ ಕಾರ್ಯಾಲಯವನ್ನು ಬೆಳಗಾವಿಯಲ್ಲೇ ಮುಂದುವರಿಸಬೇಕು’.

ಪರಿಹಾರ ವಿತರಿಸಿ

‘2019-20ನೇ ಸಾಲಿನ ಮತ್ತು ಪ್ರಸ್ತುತ ವರ್ಷದ ಮುಂಗಾರಿನಲ್ಲಿ ಸುರಿದ ಅಪಾರ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಿಸಬೇಕು. ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ಖಾದಿ ಮತ್ತು ಇನ್ನಿತರ ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳಲ್ಲಿ ಚರಕ ನೂಲುವ, ನೇಯುವ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ₹5 ಸಾವಿರ ಗೌರವಧನ ನೀಡಬೇಕು. ಬೆಳಗಾವಿ–ಕಿತ್ತೂರು– ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುನ್ನ ಆ ಭಾಗದ ರೈತರ ಸಭೆ ಕರೆಯಬೇಕು. ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಸುವರ್ಣ ವಿಧಾನಸೌಧದಲ್ಲಿ ನಡೆಸಿ, ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯ ಪೂಜಾರ, ಮಹಿಳಾ ಘಟಕದ ಅಧ್ಯಕ್ಷೆ ಮೀರಾ ಭೀರಣ್ಣವರ, ಉಪಾಧ್ಯಕ್ಷೆ ಶಕುಂತಲಾ ತೇಲಿ, ನಿರ್ದೇಶಕ ಎಂ.ಎಂ. ಪೀರಜಾದೆ, ಈರಪ್ಪ ಲಕಮೋಜಿ, ಯಲ್ಲಪ್ಪ ಘಂಟಿ, ನಿಂಗಪ್ಪ ತುಳಜಿ, ಅರ್ಜುನ ಗಾವುಡ, ನೂರಪ್ಪ ಮಾದರ, ಮೃತ್ಯುಂಜಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT