ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಇಟ್ಟಪ್ಪನ ಜಾತ್ರೆಯಲ್ಲಿ ಜಾನಪದ ಲೋಕದ ಅನಾವರಣ 

ಭಕ್ತರ ಮನಸೆಳೆದ ವಿವಿಧ ಕಲಾ ಪ್ರಕಾರಗಳು, ಸಂಭ್ರಮಿಸಿದ ಭಕ್ತಗಣ
Published 4 ಫೆಬ್ರುವರಿ 2024, 4:40 IST
Last Updated 4 ಫೆಬ್ರುವರಿ 2024, 4:40 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಹಳ್ಳೂರಿನಲ್ಲಿ ನಡೆದ ಇಟ್ಟಪ್ಪನ ಜಾತ್ರೆಯಲ್ಲಿ ಜಾನಪದ ಲೋಕವೇ ಅನಾವರಣಗೊಂಡಿತು. ವಿವಿಧ ಧಾರ್ಮಿಕ ವಿಧಿವಿಧಾನ ಪಾಲಿಸಿದ ಗ್ರಾಮಸ್ಥರು, ನಾಡಿನ ವಿವಿಧೆಡೆಯಿಂದ ಕಲಾವಿದರನ್ನು ಆಹ್ವಾನಿಸಿ ಎರಡು ದಿನ ಸಂಭ್ರಮದಿಂದ ‘ಜಾನಪದ ಜಾತ್ರೆ’ಯನ್ನೂ ಆಚರಿಸಿದರು.

ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೇವರ ದರ್ಶನ ಪಡೆಯುವ ಜತೆಗೆ, ಜಾನಪದ ಕಲೆಗಳ ಪ್ರದರ್ಶನ ಕಣ್ತುಂಬಿಕೊಂಡು ಸಂತಸಪಟ್ಟರು. ಡೊಳ್ಳು, ದಮಡೆ, ದಿಮ್ಮ, ತಾಳ, ಹಲಗೆಗಳ ಸದ್ದು, ಸೋಬಾನೆ ಪದ, ಬೀಸುವ ಪದ, ಕುಟ್ಟುವ ಪದ, ಲಾವಣಿ ಪದ, ಸುಗ್ಗಿ ಪದಗಳ ಮೂಲಕ ಹಳ್ಳಿಯ ಸೊಗಡು ಅನಾವರಣಗೊಳಿಸಿದರು.
ಗದಗ ಜಿಲ್ಲೆಯ ಕೊಣ್ಣೂರಿನ ಜೈಕಿಸಾನ್‌ ಜಾನಪದ ತಂಡದವರು ತಲೆ ಮೇಲೆ ದೇವಿ ಕೊಡ ಹೊತ್ತು ಪ್ರದರ್ಶಿಸಿದ ‘ಎಲ್ಲಿ ಕಾಣೆ, ಎಲ್ಲಿ ಕಾಣೆ ಯಲ್ಲಮ್ಮನಂಥಾಕಿನ ಎಲ್ಲಿ ಕಾಣೆ...’ ಎಂಬ ಜೋಗತಿ ನೃತ್ಯ, ಹಳ್ಳೂರಿನ ಭಗೀರಥ ಯುವತಿ ಮಂಡಳದ ಜಾನಪದ ಸಮೂಹ ನೃತ್ಯಗಳು ಜನರನ್ನು ಮಂತ್ರಮುಗ್ಧರನ್ನಾಗಿಸಿದವು.

ಹುಬ್ಬಳ್ಳಿಯ ರಾಧಾಕೃಷ್ಣ ಅಕಾಡೆಮಿಯವರು ಪ್ರದರ್ಶಿಸಿದ ಶ್ರೀರಾಮಚಂದ್ರ ಪ್ರಭು ನೃತ್ಯ ಮತ್ತು ಸಮೂಹ ನೃತ್ಯ, ಹಳ್ಳೂರಿನ ಪಾಂಡುರಂಗ ರುಕ್ಮಿಣಿ ಕಲಾ ತಂಡದವರ ಹಳ್ಳಿ ಸೊಗಡಿನ ಸಮೂಹ ನೃತ್ಯಗಳು ಜನರನ್ನು ಗಮನಸೆಳೆದವು. ಸಿದ್ಧಾರೂಢ ಭಜನಾ ತಂಡದ ಪುಟಾಣಿಗಳು ನಿಜಗುಣ ಶಿವಯೋಗಿಗಳ ತತ್ವಪದಗಳನ್ನು ಸ್ವರಬ್ಧವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರಾಧಿಕ ಪತ್ತಾರ ಪ್ರಸ್ತುತಪಡಿಸಿದ ಯಕ್ಷಗಾನ ನೃತ್ಯ ಜಾನಪದ ಜಾತ್ರೆಗೆ ವಿಶೇಷ ಮೆರಗು ನೀಡಿತು.

ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಇಟ್ಟಪ್ಪನ ಜಾತ್ರೆಯಲ್ಲಿ ರಾಧಿಕಾ ಪತ್ತಾರ ಪ್ರದರ್ಶಿಸಿದ ಯಕ್ಷಗಾನ ನೃತ್ಯ ಗಮನ ಸೆಳೆಯಿತು
ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಇಟ್ಟಪ್ಪನ ಜಾತ್ರೆಯಲ್ಲಿ ರಾಧಿಕಾ ಪತ್ತಾರ ಪ್ರದರ್ಶಿಸಿದ ಯಕ್ಷಗಾನ ನೃತ್ಯ ಗಮನ ಸೆಳೆಯಿತು

ಚಿಕ್ಕೋಡಿಯ ಸಾಯಿಲಕುಮಾರ ತಂಡದವರ ಜೋಗಿಬಾಬಾ ನೃತ್ಯ, ಹುಕ್ಕೇರಿಯ ವಿಜಯಲಕ್ಷ್ಮಿ ತಳವಾರ ಅವರ ರಂಗಗೀತೆ, ತೊದಲಬಾಗಿಯ ಮಾಳು ದಳವಾಯಿ, ಅಕ್ಷತಾ ಮುತ್ತೂರ, ಹಳ್ಳೂರಿನ ಸತ್ಯಪ್ಪ ಮಹಾರಾಜ, ಯಲ್ಪಾರಟ್ಟಿಯ ಸುರೇಶ ಮಹಾರಾಜರು ಕೈಪಟ್ಟು ಬಾರಿಸುತ್ತ, ಡೊಳ್ಳಿನ ಹಾಡುಗಳನ್ನು ಹಾಡಿ ಎಲ್ಲರನ್ನೂ ಮೋಡಿ ಮಾಡಿದರು.


‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಜಾತ್ರಾ ಸಮಿತಿಯವರು ಜಾನಪದ ಜಾತ್ರೆ ನಡೆಸಲು ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಾರೆ. ಜಾತ್ರೆಯಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಿದೆ’ ಎಂದು ಸಂಘಟಕ ಸಿದ್ದಣ್ಣ ದುರದುಂಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಇಟ್ಟಪ್ಪನ ಜಾತ್ರೆಯಲ್ಲಿ ಗಮನಸೆಳೆದ ಗದಗ ಜಿಲ್ಲೆಯ ಕೊಣ್ಣೂರಿನ ಕಲಾವಿದರು ಪ್ರದರ್ಶಿಸಿದ ಸಮೂಹ ನೃತ್ಯ
ಮೂಡಲಗಿ ತಾಲ್ಲೂಕಿನ ಹಳ್ಳೂರಿನ ಇಟ್ಟಪ್ಪನ ಜಾತ್ರೆಯಲ್ಲಿ ಗಮನಸೆಳೆದ ಗದಗ ಜಿಲ್ಲೆಯ ಕೊಣ್ಣೂರಿನ ಕಲಾವಿದರು ಪ್ರದರ್ಶಿಸಿದ ಸಮೂಹ ನೃತ್ಯ

‘ಈಗ ಜಾನಪದ ಕಲೆಗಳು ಮರೆಯಾಗುತ್ತಿವೆ. ತೆರೆಮರೆಯಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸುವ ಕೆಲಸವನ್ನು ಜಾತ್ರಾ ಸಮತಿಯವರು ಮಾಡಿದ್ದು ಪ್ರಶಂಸನೀಯ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಅಭಿಪ್ರಾಯಪಟ್ಟರು.
ಈ ಜಾನಪದ ಜಾತ್ರೆಯಲ್ಲಿ 200ಕ್ಕೂ ಅಧಿಕ ಕಲಾವಿದರ ಸಂಗಮವಾಗಿತ್ತು. ಇದೇ ಸಮಾರಂಭದಲ್ಲಿ 50ಕ್ಕೂ ಅಧಿಕ ಜಾನಪದ ಕಲಾವಿದರಿಗೆ ‘ಜಾನಪದ ಕಲಾರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಇಟ್ಟಪ್ಪನ ಜಾತ್ರೆಗೆ ಬಂದಂತ ಭಕ್ತರೆಲ್ಲ ಜಾನಪದ ಕಲಾವೈಭವ ನೋಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT