ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಘಡ ವನ್ಯಧಾಮದ ಅತಿಕ್ರಮಣ ಪ್ರಕರಣ; ಇಲಾಖೆ ಸು‍ಪರ್ದಿಗೆ 26 ಎಕರೆ ಅರಣ್ಯ

Published 22 ಜೂನ್ 2023, 15:59 IST
Last Updated 22 ಜೂನ್ 2023, 15:59 IST
ಅಕ್ಷರ ಗಾತ್ರ

ಭೀಮಘಡ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಘಡ ವನ್ಯಧಾಮದ, ಅಮಗಾಂವ ಗ್ರಾಮದ ಹದ್ದಿಯಲ್ಲಿ ಅತಿಕ್ರಮಣ ಮಾಡಿಕೊಂಡಿದ್ದ 26 ಎಕರೆ ಅರಣ್ಯವು ಈಗ ಅರಣ್ಯ ಇಲಾಖೆಯ ಸುಪರ್ದಿಗೆ ಸೇರಿದೆ. ನಾಲ್ಕು ದಶಕಗಳ ಹಿಂದೆ ಮಾಡಿಕೊಂಡಿದ್ದ ಅತಿಕ್ರಮಣ ತೆರವು ಮಾಡಿದ ಅಧಿಕಾರಿಗಳು, ಈಗ ಬೇಲಿ ಹಾಕಿ ಹದ್ದಿಯನ್ನು ಗುರುತಿಸಿದ್ದಾರೆ.

ಪ್ರಸಕ್ತ ಮಾರ್ಚ್‌ನಲ್ಲಿಯೇ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯಾಧಿಕಾರಿಗಳು ಐವರು ಆರೋಪಿಗಳನ್ನೂ ಬಂಧಿಸಿದ್ದಾರೆ. ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಅವರು, ‘ಭೀಮಘಡ ಅರಣ್ಯದ ಅತಿಕ್ರಮಣ ನಡೆದಿದ್ದು 40 ವರ್ಷಗಳ ಹಿಂದೆ. ಆಗಿನಿಂದಲೂ ಇಲ್ಲಿ ಗೋಡಂಬಿ ಬೆಳೆಯಲಾಗುತ್ತಿತ್ತು. ಈವರೆಗೂ ಕೃಷಿ ಮಾಡಿದ್ದಾರೆ. ಆದರೆ, ಈಗ ನಾವು ಎಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದೇವೆ. ಪ್ರದೇಶವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡಿದ್ದೇವೆ’ ಎಂದರು.

ಕಾಡಿನ ವಿಶೇಷತೆ ಏನು: ಅಮಗಾಂವ ಗ್ರಾಮಕ್ಕೆ ಹೊಂದಿಕೊಂಡಿರುವ ಕಾಡಿನಲ್ಲಿ ಬೆಲೆಬಾಳುವ ಬೃಹತ್ ಮರಗಳನ್ನು ಕಡಿದು ವ್ಯಾಪಕ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ, ಕೃಷಿ ಮಾಡುತ್ತಿರುವುದು ಈಚೆಗೆ ಬೆಳಕಿಗೆ ಬಂದಿತ್ತು. ಈ ಪ್ರದೇಶವು ಹುಲಿ, ಕರಿಚಿರತೆ, ಕಾಡೆಮ್ಮೆ, ಕಾಡುನಾಯಿ, ಹಾರ್ನ್‌ಬಿಲ್, ಕರಡಿ ಮತ್ತಿತರ ಅಪರೂಪದ ಕಾಡುಪ್ರಾಣಿಗಳಿಗೆ ತಾಣವಾಗಿದೆ.

ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಅಮಗಾಂವ ಕೂಡ ಒಂದಾಗಿತ್ತು. ಆದರೆ, ಇಲ್ಲಿಯ ಕೆಲ ಪ್ರಭಾವಿಗಳು ವನ್ಯಧಾಮದ ಕೋಟ್ಯಂತರ ಬೆಲೆಬಾಳುವ ಮರಗಳನ್ನು ಕಡಿದು ಬೆಂಕಿ ಹಚ್ಚಿ ಹಂತ ಹಂತವಾಗಿ ಹತ್ತಾರು ಎಕರೆ ಒತ್ತುವರಿ ಮಾಡಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 34(ಎ) ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 19563 ಸೆಕ್ಷನ್‌ 64(ಎ) ಪ್ರಕಾರ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಅಮಗಾಂವ ಗ್ರಾಮದ ವಾಸುದೇವ ಗೋವಿಂದ ಗಡಕರಿ (75), ಗಣೇಶ ಗೋವಿಂದ ಘಾಡಿ (70), ಮುಕುಂದ ಗಣೇಶ ಘಾಡಿ (65), ಧಾನಾಜಿ ಬಂಡು ಗವಸ (50), ಲಕ್ಷ್ಮಣ ಸವದೇವ ಘಾಡಿ (69) ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

ಕರ್ತವ್ಯ ಲೋಪ ಎಸಗಿದ ಆರೋಪದಡಿ ಮಹೇಶ ದುಳಖೇಡಕರ ಹಾಗೂ ಸಂತೋಷ ಗಸ್ತಿ ಅವರನ್ನು ಅಮಾನತು ಮಾಡಲಾಗಿತ್ತು.

ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ
ಭೀಮಘಡ ಅರಣ್ಯದಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು. ಸೂಕ್ತ ನಿರ್ದೇಶನ ನೀಡಲಾಗುವುದು.
ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT