ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಉಡುಪು ತಯಾರಿಕೆ: ಸ್ನೇಹಿತರ ‘ಕಮಾಲ್’

ನಾಗನೂರಲ್ಲಿ ಘಟಕ; 25 ಮಂದಿಗೆ ಕೆಲಸ
Last Updated 18 ಜುಲೈ 2019, 7:07 IST
ಅಕ್ಷರ ಗಾತ್ರ

ಮೂಡಲಗಿ: ಪದವಿ ಪಡೆದರೂ ಕೆಲಸ ದೊರಯಲಿಲ್ಲ ಎಂದು ಕೈಚೆಲ್ಲಿ ಕಾಲಹರಣ ಮಾಡುತ್ತಾ, ಮತ್ತೊಂದು ಉದ್ಯೋಗದ ಬೇಟೆಯಲ್ಲಿ ತೊಡಗಲು ಮುಂದಾಗುವ ಯುವಕರಿಗೆ ಇಲ್ಲಿನ ಯುವಕರಾದ ಶ್ರೀಶೈಲ ಗೋಕಾಕ ಹಾಗೂ ಶಿವು ಚಿಕ್ಕಣ್ಣವರ ಮಾದರಿಯಾಗಿದ್ದಾರೆ.

ಸ್ನೇಹಿತರಾದ, ಎಂಜಿನಿಯರಿಂಗ್ (ಬಿ.ಇ. ಸಿವಿಲ್) ಪದವಿ ಪಡೆದಿರುವ ಶ್ರೀಶೈಲ ಹಾಗೂ ಎಂ.ಎಸ್.ಡಬ್ಲ್ಯು. ಮಾಡಿರುವ ಶಿವು ನಾಗನೂರ ಗ್ರಾಮದಲ್ಲಿ ಎಸ್.ಆರ್. ಟೆಕ್ಸ್‌ಟೈಲ್ಸ್‌ ಹೆಸರಿನಲ್ಲಿ ಸಿದ್ಧ ಉಡುಪುಗಳನ್ನು ತಯಾರಿಸುವ ಉದ್ಯಮವನ್ನು ಪ್ರಾರಂಭಿಸಿ ಗಮನಸೆಳೆದಿದ್ದಾರೆ. ಸ್ವಾವಲಂಬನೆ ಸಾಧಿಸಿ ಈ ಭಾಗದಲ್ಲಿನ ಉದ್ಯಮಿಗಳಾಗಿ ಗುರುತಿಸಿಕೊಳ್ಳುವ ಜೊತೆಗೆ, ಗ್ರಾಮೀಣ ಪ್ರದೇಶದ ಕೆಲವರಿಗೆ ಉದ್ಯೋಗದ ‘ಆಸರೆ’ಯನ್ನೂ ಒದಗಿಸಿದ್ದಾರೆ.

50 ಅಡಿ ಉದ್ ಮತ್ತು ಅಗಲದ ಕೊಠಡಿಯಲ್ಲಿ ಇವರ ಉದ್ಯಮ ನಡೆಯುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರ ಅಳತೆಯವರೆಗೆ ಬಣ್ಣಬಣ್ಣದ, ಹಲವು ವಿನ್ಯಾಸದ, ವಿವಿಧ ಮಾದರಿಯ ಅಂಗಿಗಳನ್ನು ಈ ಘಟಕದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಅದಕ್ಕಾಗಿ 30 ಹೊಲಿಗೆ ಯಂತ್ರಗಳು ಸೇರಿದಂತೆ ಬಟ್ಟೆ ಕತ್ತರಿಸುವ, ಬಟನ್‌ ಜೋಡಿಸುವ, ಕಾಜಾ ಮಾಡುವ ಆಧುನಿಕ ಯಂತ್ರಗಳನ್ನು ಹಾಕಿದ್ದಾರೆ. ಬಟ್ಟೆ ಹೊಲಿಯಲು 15 ಮಹಿಳೆಯರು ಸೇರಿದಂತೆ ಮಾರುಕಟ್ಟೆ ನಿರ್ವಹಣೆ, ಮತ್ತಿತರ ಕೆಲಸಕ್ಕೆಂದು ಸದ್ಯ 25 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

‘ನಮ್ಮ ಘಟಕದಲ್ಲಿ ನಿತ್ಯ ಸರಾಸರಿ 100ರಿಂದ 125 ಶರ್ಟ್‌ಗಳು ಸಿದ್ಧವಾಗುತ್ತವೆ. ಮದುವೆ ಸೀಸನ್, ಹಬ್ಬಹರಿದಿನಗಳ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಅದಕ್ಕೆ ತಕ್ಕಂತೆ ತಯಾರಿಕೆಗೆ ಮುಂದಾಗುತ್ತೇವೆ’ ಎಂದು ಉದ್ಯಮದ ಮೇಲ್ವಿಚಾರಣೆ ಮಾಡುವ ಶಿವು ಚಿಕ್ಕಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಟ್ಟೆಯನ್ನು ಸಗಟು ಪ್ರಮಾಣದಲ್ಲಿ ಅಹಮದಾಬಾದ್‌ನಿಂದ ಖರೀದಿಸಿ ತರಿಸುತ್ತೇವೆ. ಉತ್ತಮ ಗುಣಮಟ್ಟದ ಬಟ್ಟೆಗೆ ಆದ್ಯತೆ ಮತ್ತು ಜನರ ಬೇಡಿಕೆಗೆ ಅನುಗುಣವಾಗಿ, ಅಭಿರುಚಿಗೆ ತಕ್ಕಂತಹ ವಿನ್ಯಾಸ ಶರ್ಟ್‌ಗಳನ್ನು ಸಿದ್ಧಪಡಿಸುತ್ತಿದ್ದೇವೆ. ಸದ್ಯ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಗೋವಾದಲ್ಲಿ ಈ ಸಿದ್ಧ ಉಡುಪುಗಳಿಗೆ ಬೇಡಿಕೆ ಇದೆ’ ಎಂದು ಮಾಹಿತಿ ನೀಡಿದರು.

‘ಈಚೆಗೆ ಶಾಲಾ ಮಕ್ಕಳ ಸಮವಸ್ತ್ರಗಳನ್ನು ತಯಾರಿಸುವುದನ್ನು ಪ್ರಾರಂಭಿಸಿದ್ದೇವೆ. ಕೆಲವು ಶಾಲೆ, ಕಾಲೇಜುಗಳಿಂದ ಬೇಡಿಕೆ ಬರುತ್ತಿದೆ. ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬನೆಯತ್ತ ಒಯ್ಯುವುದರ ಜೊತೆಗೆ ಸ್ವಂತ ಉದ್ಯಮ ನಡೆಸುತ್ತಿರುವ ಹೆಮ್ಮೆ ನಮಗಿದೆ' ಎನ್ನುತ್ತಾರೆ ಈ ಸ್ನೇಹಿತರು. ಸಂಪರ್ಕಕ್ಕೆ ಮೊ:9483969499.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT