ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ಇ–ಹುಂಡಿ’ ಮೂಲಕ ದೇಣಿಗೆ ಸಂಗ್ರಹ

Published 24 ಸೆಪ್ಟೆಂಬರ್ 2023, 3:12 IST
Last Updated 24 ಸೆಪ್ಟೆಂಬರ್ 2023, 3:12 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ವಿವಿಧ ದೇವಸ್ಥಾನಗಳು ಭಕ್ತರಿಂದ ದೇಣಿಗೆ ಸಂಗ್ರಹಕ್ಕಾಗಿ ಡಿಜಿಟಲ್‌ ವೇದಿಕೆ ಬಳಸಿಕೊಳ್ಳುತ್ತಿವೆ. ಅಂತೆಯೇ ಇಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯೊಂದು ದೇಣಿಗೆ ಸಂಗ್ರಹಿಸಲು ‘ಇ–ಹುಂಡಿ’ ವ್ಯವಸ್ಥೆ ಅಳವಡಿಸಿಕೊಂಡಿದೆ.

ಇಲ್ಲಿನ ವಡಗಾವಿಯ ಸೋನಾರ ಗಲ್ಲಿಯ ಮಂಡಳಿ ಕಳೆದ 30 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು, ಇದೇ ಮೊದಲ ಬಾರಿ ಡಿಜಿಟಲ್‌ ವೇದಿಕೆ ಮೂಲಕ ದೇಣಿಗೆ ಸಂಗ್ರಹಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಭಕ್ತರ ಕಾಣಿಕೆ ಹಣ ಪಾರದರ್ಶಕವಾಗಿ ಬಳಕೆಯಾಗಲಿ ಎನ್ನುವ ಸದುದ್ದೇಶದಿಂದ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ನೀಡಿದ ಕ್ಯೂಆರ್‌ ಕೋಡ್‌ ಹೊಂದಿದ ಫಲಕವನ್ನು ಮಂಡಳಿಯಲ್ಲಿ ಅಳವಡಿಸಿದೆ.

‘ಇ–ಹುಂಡಿ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗಣೇಶನ ಮೂರ್ತಿ ವೀಕ್ಷಣೆಗೆ ಬರುವವರು ತಮ್ಮ ಮೊಬೈಲ್‌ಗಳಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ದೇಣಿಗೆ ನೀಡುತ್ತಾರೆ. ಮಂಟಪ ಸಿದ್ಧವಾದ ದಿನವೇ ಫಲಕ ಅಳವಡಿಸಲಾಗಿದ್ದು, 10 ದಿನಗಳಲ್ಲಿ ಈ ವ್ಯವಸ್ಥೆಯಿಂದ ₹44 ಸಾವಿರ ಸಂಗ್ರಹವಾಗಿದೆ’ ಎಂದು ಮಂಡಳಿಯ ಟ್ರಸ್ಟಿ ಕಿರಣ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದಲ್ಲಿ 378 ಕಡೆ ಸಾರ್ವಜನಿಕ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಬಹುತೇಕ ಮಂಡಳಿಗಳ ಮಂಟಪದಲ್ಲಿ ದೇಣಿಗೆ ಸಂಗ್ರಹಕ್ಕಾಗಿ ಪೆಟ್ಟಿಗೆ ಇರಿಸಲಾಗಿದೆ. ಜತೆಗೆ, ಮಂಡಳಿಯ ಪ್ರಮುಖರು ಜನರಿಂದ ನಗದು ರೂಪದಲ್ಲಿ ದೇಣಿಗೆ ಸಂಗ್ರಹಿಸಿ, ರಸೀದಿ ಕೊಡುತ್ತಿದ್ದಾರೆ.

ಮೊಬೈಲ್‌ಗೆ ಸಂದೇಶ

‘ಇದೇ ಮೊದಲ ವರ್ಷವಾದ್ದರಿಂದ ಡಿಜಿಟಲ್‌ ವೇದಿಕೆಯೊಂದಿಗೆ, ಹಳೆಯ ವ್ಯವಸ್ಥೆ ಕೂಡ ಅನುಸರಿಸುತ್ತಿದ್ದೇವೆ. ಕೆಲವರು ನಗದು ರೂಪದಲ್ಲಿ ದೇಣಿಗೆ ನೀಡಿ, ರಸೀದಿ ಪಡೆಯುತ್ತಿದ್ದಾರೆ. ಹಣ ಸ್ವೀಕೃತವಾಗಿರುವ ಕುರಿತು ಅಂತಹವರ ಮೊಬೈಲ್‌ಗೆ ಸಂದೇಶ ರವಾನಿಸುತ್ತಿದ್ದೇವೆ. ಎರಡೂ ವ್ಯವಸ್ಥೆಗಳಿಂದ ಒಟ್ಟಾರೆ ₹3 ಲಕ್ಷ ದೇಣಿಗೆ ಸಂಗ್ರಹವಾಗಿದೆ’ ಎಂದು ಕಿರಣ ಪಾಟೀಲ ತಿಳಿಸಿದರು.

‘ಮುಂದಿನ ವರ್ಷ ಇಡೀ ವ್ಯವಸ್ಥೆ ಡಿಜಿಟಲ್‌ಮಯವಾಗಲಿದೆ. ಕೈಬರಹದ ಬದಲಿಗೆ, ಪ್ರಿಂಟಿಂಗ್‌ ರಸೀದಿಯನ್ನೇ ಕೊಡಲಿದ್ದೇವೆ. ಅಲ್ಲದೆ, ಮಂಡಳಿ ಹೆಸರಿನಲ್ಲಿ ಪ್ರತ್ಯೇಕ ಆ್ಯಪ್‌ ರಚಿಸಲು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.

ಯಾವುದಕ್ಕೆ ಬಳಕೆ?

‘ಪ್ರತಿವರ್ಷ ಗಣೇಶೋತ್ಸವದಲ್ಲಿ ₹3 ಲಕ್ಷದಿಂದ ₹4 ಲಕ್ಷ ಸಂಗ್ರಹವಾಗುತ್ತದೆ. ಆ ಹಣವನ್ನು ಗಣೇಶನ ಬೃಹತ್‌ ಮೂರ್ತಿ ಮಂಟಪ ತಯಾರಿಕೆಗೆ ವಿದ್ಯುದ್ದೀಪಗಳ ಅಲಂಕಾರ ವಿದ್ಯುತ್‌ ಶುಲ್ಕ ಭರಿಸಲು ಬಳಸುತ್ತೇವೆ. ಇದೇ ಹಣದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರಿಗೆ ಒಂದು ದಿನ ಮಹಾಪ್ರಸಾದ ವ್ಯವಸ್ಥೆ ಮಾಡುತ್ತೇವೆ. ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ ಆಹಾರ ಧಾನ್ಯಗಳು ಮತ್ತು ಆರ್ಥಿಕ ನೆರವು ಒದಗಿಸುತ್ತೇವೆ. ಸುಮಾರು 20 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತೇವೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ರಕ್ತದಾನ ಶಿಬಿರ ಆಯೋಜಿಸುತ್ತೇವೆ. ನಮ್ಮ ಭಾಗದ ಬಡವರಿಗೆ ವೈದ್ಯಕೀಯ ಚಿಕಿತ್ಸೆಗೂ ನೆರವಾಗುತ್ತೇವೆ. ಕೊರೊನಾ ಸಂಕಷ್ಟ ಸಮಯದಲ್ಲಿ ಜನರಿಗೆ ನೆರವಾಗಿದ್ದೇವೆ’ ಎಂದು ಕಿರಣ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT