ಬೆಳಗಾವಿ: ‘ಗಣೇಶ ವೀಕ್ಷಣೆ ಟೂರಿಸಂ’ ಆರಂಭ

7
ಪಟಾಕಿ ಸಿಡಿಸಿ ಪರಿಸರ ಮಾಲಿನ್ಯದ ಕೊಡುಗೆ!

ಬೆಳಗಾವಿ: ‘ಗಣೇಶ ವೀಕ್ಷಣೆ ಟೂರಿಸಂ’ ಆರಂಭ

Published:
Updated:
Deccan Herald

ಬೆಳಗಾವಿ: ನಗರದಲ್ಲಿ ‘ಗಣೇಶ ಮೂರ್ತಿಗಳ ವೀಕ್ಷಣೆ ಪ್ರವಾಸೋದ್ಯಮ’ ಆರಂಭವಾಗಿದೆ.

ಗಣೇಶ ಚತುರ್ಥಿ ಅಂಗವಾಗಿ ಪ್ರಮುಖ ವೃತ್ತ, ರಸ್ತೆಗಳ ಬದಿಯಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಮಂಟಪ ನಿರ್ಮಿಸಿ ವೈವಿಧ್ಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಅಂದಾಜಿನ ಪ್ರಕಾರ ಈ ಬಾರಿ 1,044 ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳಲ್ಲಿ ಬಹುತೇಕ ಮೂರ್ತಿಗಳನ್ನು 11ನೇ ದಿನಕ್ಕೆ  ಅದ್ಧೂರಿಯಾಗಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಿವಿಧ ಹೊಂಡಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಆಕರ್ಷಕ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮಂಟಪಗಳು ಹಾಗೂ ಮೂರ್ತಿಗಳನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳವರು, ಜಿಲ್ಲೆಯ ವಿವಿಧ ತಾಲ್ಲೂಕುಗಳವರು ಹಾಗೂ ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಮತ್ತು ಆಸಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ, ಗಣೇಶ ಪೆಂಡಾಲ್‌ಗಳ ಬಳಿ ಜನಜಂಗುಳಿಯೇ ಕಂಡುಬರುತ್ತಿದೆ. ಹಲವು ಕಡೆಗಳಲ್ಲಿ ದೇವಸ್ಥಾನಗಳ ಮಾದರಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮೂರ್ತಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

11 ದಿನಗಳವರೆಗೆ

11 ದಿನಗಳವರೆಗೆ ಮೂರ್ತಿಗಳನ್ನು ನೋಡಲು ಜನರು ಕುಟುಂಬ ಸಮೇತ ಬರುತ್ತಾರೆ. ಹೀಗಾಗಿ, ಪೆಂಡಾಲ್‌ಗಳ ಸಮೀಪದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಒಳ್ಳೆಯ ವ್ಯಾಪಾರವಾಗುತ್ತದೆ. ಅದರಲ್ಲೂ ಆಟಿಕೆಗಳ ಮಾರಾಟ ಜೋರಾಗಿರುತ್ತದೆ.

ಗಣೇಶ ಚತುರ್ಥಿ ದಿನವಾದ ಗುರುವಾರ ಮನೆಯವರು, ಬಂಧುಗಳು ಹಾಗೂ ಸ್ನೇಹಿತರು ಸೇರಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ಮನೆ ತುಂಬಿಸಿಕೊಂಡರು. ಆಯಾ ಬಡಾವಣೆಯ ಸಾರ್ವಜನಿಕ ಮಂಡಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಗಣಪನನ್ನು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದರು. ಇದರೊಂದಿಗೆ ಹಬ್ಬಕ್ಕೆ ಸಡಗರದ ಚಾಲನೆ ದೊರೆಯಿತು. ಗುರುವಾರ ರಾತ್ರಿ ವೇಳೆಗೆ ಎಲ್ಲ ಮಂಟಪಗಳಲ್ಲೂ ಗಣೇಶ ಮೂರ್ತಿಗಳು ವಿರಾಜಮಾನವಾಗಿದ್ದು, ಸಾರ್ವಜನಿಕರಿಗೆ ದರ್ಶನ ನೀಡುತ್ತಿವೆ.

ವಿಘ್ನ ನಿವಾರಕ ವಿನಾಯಕನನ್ನು ನೋಡಲು ಬರುವವರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ತಡರಾತ್ರಿವರೆಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ನಗರದಾದ್ಯಂತ ಹೋಟೆಲ್‌, ಉಪಾಹಾರ ಕೇಂದ್ರಗಳು ತಡರಾತ್ರಿವರೆಗೂ ತೆರೆದಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೆಂಡಾಲ್‌ಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪಟಾಕಿಗಳು

ಈ ಹಬ್ಬದಲ್ಲಿ ದೀಪಾವಳಿಗಿಂತಲೂ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ಸಿಡಿಸುವುದು ಕಂಡುಬರುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ.

‌ಉತ್ಸವದ ಮೊದಲ ದಿನವಾದ ಗುರುವಾರ ನಗರದಾದ್ಯಂತ ಸಾರ್ವಜನಿಕರು ಅಪಾರ ಪ್ರಮಾಣದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಕ್ಕಳೊಂದಿಗೆ ಮನೆ ಮಂದಿಯೂ ಸೇರಿಕೊಂಡಿದ್ದು ಕಂಡುಬಂದಿತು.

‘ಗಣೇಶ ಹಬ್ಬದ ಸಂದರ್ಭದಲ್ಲಿ ಹಿಂದೆ ಹೆಚ್ಚಿನ ಪಟಾಕಿಗಳನ್ನು ಸುಡುತ್ತಿದ್ದರು. ಇತ್ತೀಚೆಗೆ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಕ್ರಮ ಕೈಗೊಂಡರೆ ಅಥವಾ ಅರಿವು ಮೂಡಿಸಿದರೆ, ಪರಿಸರ ಮಾಲಿನ್ಯ ಆಗುವುದನ್ನು ತ‍ಪ್ಪಿಸಬಹುದಾಗಿದೆ’ ಎನ್ನುತ್ತಾರೆ ತಿಳಕವಾಡಿಯ ರಾಜು ಪಾಟೀಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !