ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಬೆಲೆ ನೀಡಲು ಆಗ್ರಹ

Last Updated 7 ಫೆಬ್ರುವರಿ 2020, 15:20 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಸಕ್ತ ಬಜೆಟ್‍ನಲ್ಲಿ ರೈತರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿ, ಭಾರತೀಯ ಕೃಷಿಕ ಸಮಾಜ ಸಂಯುಕ್ತ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಬದಲು ವೈಜ್ಞಾನಿಕ ಬೆಲೆ ನಿಗದಿಪಡಿಸುವ ಯೋಜನೆ ಜಾರಿಗೊಳಿಸಬೇಕು. ಸರ್ಕಾರಿ ನೌಕರರ ವೇತನ ಪರಿಷ್ಕರಿಸುವ ಮಾದರಿಯಲ್ಲಿ ಕಾಲಕಾಲಕ್ಕೆ ವೈಜ್ಞಾನಿಕ ಬೆಲೆಯನ್ನೂ ಪರಿಷ್ಕರಿಸಬೇಕು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗಾಗಿ ಸಮಗ್ರ ಜಲ ನೀತಿ ಘೋಷಿಸಬೇಕು. ತಕ್ಕಂತೆ ಅನುದಾನ ಮೀಸಲಿಡಬೇಕು. ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆಗಳಿಗೆ ಅನುದಾನ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಅತಿವೃಷ್ಟಿ ಹಾಗೂ ಅನಾವೃಷ್ಟಿ ತೊಂದರೆಗೆ ಒಳಗಾಗುವ ಉತ್ತರ ಕರ್ನಾಟಕದವರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಲು ₹ 10ಸಾವಿರ ಕೋಟಿ ಆಪತ್ತು ನಿಧಿ ಸ್ಥಾಪಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾಗುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಘೋಷಿಸಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುವವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದು ಕೋರಿದರು.

‘ಎಪಿಎಂಸಿಗಳನ್ನು ಮೇಲ್ದರ್ಜೆಗೇರಿಸಿ, ಅಗತ್ಯ ಸಿಬ್ಬಂದಿ ನೇಮಿಸಬೇಕು. ಕಮಿಷನ್ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಬೆಳೆ ಸಾಲವನ್ನು ಎಕರೆಗೆ ₹ 1 ಲಕ್ಷದವರೆಗೆ ಹೆಚ್ಚಿಸಬೇಕು. ಬೆಳಗಾವಿಯಲ್ಲಿ ಮಾವು ಮತ್ತು ದ್ರಾಕ್ಷಿ ಸಂರಕ್ಷಣಾ ಘಟಕಗಳನ್ನು ಪ್ರಾರಂಭಿಸಬೇಕು. ರಸಗೊಬ್ಬರ, ಬಿತ್ತನೆ ಬೀಜ, ಔಷಧಗಳನ್ನು ಜಿಎಸ್‍ಟಿಯಿಂದ ಮುಕ್ತಗೊಳಿಸಬೇಕು. ಫಸಲ್ ಬಿಮಾ ಯೋಜನೆಯನ್ನು ಕಬ್ಬು ಬೆಳೆಗೂ ವಿಸ್ತರಿಸಬೇಕು. ಹೊಲಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವ ಯೋಜನೆ ಜಾರಿಗೊಳಿಸಬೇಕು. ಯಶಸ್ವಿನಿ ವಿಮಾ ಯೋಜನೆ ಪುನರಾರಂಭಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಯುವ ಘಟಕದ ಅಧ್ಯಕ್ಷ ಸುನಿಲ ಹಂಪಣ್ಣವರ, ಸುರೇಶ ಮರಲಿಂಗಣ್ಣವರ, ಆರ್.ಎಸ್. ದರ್ಗೆ, ಅಡಿವೆಪ್ಪ ಕುಂದರಗಿ, ನೇಮಿಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT