ಶುಕ್ರವಾರ, ಫೆಬ್ರವರಿ 26, 2021
32 °C

ಕಣಕುಂಬಿಗೆ ಗೋವಾ ಅಧಿಕಾರಿಗಳ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ (ಬೆಳಗಾವಿ ಜಿಲ್ಲೆ): ನೆರೆಯ ಗೋವಾ ರಾಜ್ಯದ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಪರಿಸರವಾದಿಗಳ ನಿಯೋಗವು ಸೋಮವಾರ ತಾಲ್ಲೂಕಿನ ಕಣಕುಂಬಿ ಗ್ರಾಮಕ್ಕೆ ಭೇಟಿ ನೀಡಿ, ಕಳಸಾ ಕಾಲುವೆಯ ಕಾಮಗಾರಿಯನ್ನು ಪರಿಶೀಲಿಸಿ ತೆರಳಿದೆ.

ಗೋವಾ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಸಂದೀಪ ನಾಡಕರ್ಣಿ ನೇತೃತ್ವದಲ್ಲಿ ಭೇಟಿ ನೀಡಿದ ನಿಯೋಗದಲ್ಲಿ ಹಿರಿಯ ಅಧಿಕಾರಿಗಳಾದ ಪ್ರೇಮಾನಂದ ಕಾಮತ, ಶ್ರೀಕಾಂತ ಪಾಟೀಲ, ದಿಲೀಪ ನಾಯ್ಕ, ಪರಿಸರವಾದಿಗಳಾದ ರವಿಪ್ರಸಾದ ಬಾಂದೇಕರ, ಅಪ್ಪಾಜಿ ನಾಯ್ಕ, ಪೀಟರ್ ಡಿಕೊಸ್ಟಾ ಸೇರಿದಂತೆ 10ಕ್ಕೂ ಹೆಚ್ಚು ಸದಸ್ಯರು ಇದ್ದರು.

ಗೋವಾ ಅಧಿವೇಶನದಲ್ಲಿ ಪ್ರಸ್ತಾಪ:

ಕಳೆದ ವಾರ ನಡೆದ ಗೋವಾ ವಿಧಾನಸಭೆಯ ಅಧಿವೇಶನದಲ್ಲಿ ಗೋಮಾಂತಕ ಪಕ್ಷದ ಶಾಸಕರು ಕಳಸಾ ಕಾಲುವೆಯ ಬಗ್ಗೆ ಪ್ರಸ್ತಾಪಿಸಿದ್ದರು. ಮಹದಾಯಿ ನ್ಯಾಯ ಮಂಡಳಿಯ ಆದೇಶದಂತೆ ಕಳಸಾ ಕಾಲುವೆಗೆ ನಿರ್ಮಿಸಲಾದ ತಡೆಗೋಡೆಯನ್ನು ಕರ್ನಾಟಕ ಸರ್ಕಾರ ಒಡೆದು ಹಾಕಿದೆ ಎಂದು ಆರೋಪಿಸಿದ್ದರು. ಅದಕ್ಕಾಗಿ ಸ್ಥಳ ವೀಕ್ಷಿಸಲು ನಿಯೋಗವು ಆಗಮಿಸಿತ್ತು ಎಂದು ಹೇಳಲಾಗುತ್ತಿದೆ.

ಮಲಪ್ರಭಾ ನದಿ ಪಾತ್ರದ ಪ್ರದೇಶ, ಕಳಸಾ ಕಾಲುವೆ ನಿರ್ಮಾಣ ಕಾಮಗಾರಿ ನಡೆದ ಪ್ರದೇಶ ಮತ್ತು ತಡೆಗೋಡೆ ನಿರ್ಮಿಸಿದ ಪ್ರದೇಶ ಸೇರಿದಂತೆ ಒಟ್ಟು 5 ಕಿ.ಮೀ ವ್ಯಾಪ್ತಿಯ ಕಳಸಾ ಮತ್ತು ಕಣಕುಂಬಿ ಅಚ್ಚುಕಟ್ಟು ಪ್ರದೇಶದಲ್ಲಿ ಸದಸ್ಯರು ಪರಿಶೀಲನೆ ನಡೆಸಿದ್ದರು. ತಮ್ಮ ಭೇಟಿಯ ವರದಿಯನ್ನು ಸರ್ಕಾರಕ್ಕೆ ಸದ್ಯದಲ್ಲಿಯೇ ಸಲ್ಲಿಸಲಿದ್ದು, ಇದು ಕಲಾಪದಲ್ಲಿ ಪುನಃ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಣಕುಂಬಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸಂಪರ್ಕಿಸಿದ ಸದಸ್ಯರು, ವಿವಿಧ ಮಾಹಿತಿ ಪಡೆದುಕೊಂಡರು. ಪ್ರಸಕ್ತ ವರ್ಷ ಕಣಕುಂಬಿ ಅರಣ್ಯದಲ್ಲಿ ಸುರಿದ ಮಳೆಯ ಪ್ರಮಾಣ, ಮಲಪ್ರಭಾ ನದಿಯ ಹರಿವು, ನದಿಯಲ್ಲಿ ವಿಲೀನಗೊಳ್ಳುವ ಇತರೆ ಜಲಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇದಲ್ಲದೇ, ಸುತ್ತಮುತ್ತಲಿನ ಪ್ರದೇಶಗಳ ಫೋಟೊ ತೆಗೆದುಕೊಂಡರು ಹಾಗೂ ವಿಡಿಯೊ ಚಿತ್ರೀಕರಣ ಮಾಡಿಕೊಂಡರು ಎಂದು ಪ್ರತ್ಯಕ್ಷದರ್ಶಿ, ಕಣಕುಂಬಿ ಗ್ರಾಮಸ್ಥ ಪಾಂಡುರಂಗ ಗಾವಡೆ ತಿಳಿಸಿದರು.

ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ:
‘ಕಣಕುಂಬಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಗೋವಾ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ’ ಎಂದು ತಹಶೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ಖಾನಾಪುರ ಸಿಪಿಐ ಐ.ಎಸ್ ಗುರುನಾಥ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು