ಬುಧವಾರ, ಜನವರಿ 20, 2021
15 °C

‘ಪಂಚಾಯಿತಿ ನೌಕರರ ವೇತನಕ್ಕೆ ಹಣ ಬಿಡುಗಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವೇತನಕ್ಕೆ ಕಡಿಮೆ ಬೀಳುವ ಹಣ ಬಿಡುಗಡೆ ಮಾಡಲು ಒತ್ತಾಯಿಸಿ ಸತತ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಗ್ರಾಮ ಪಂಚಾಯಿತಿ ನೌಕರರು ಈಗ ನಿರಾಳರಾಗಿದ್ದಾರೆ. ಸರ್ಕಾರವು ಈಚೆಗೆ ಅನುದಾನ ಬಿಡುಗಡೆ ಮಾಡಿರುವುದು ಇದಕ್ಕೆ ಕಾರಣವಾಗಿದೆ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ಅಧ್ಯಕ್ಷ ವಿ.ಪಿ. ಕುಲಕರ್ಣಿ ಹಾಗೂ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ ತಿಳಿಸಿದ್ದಾರೆ.

‘2018ರ ಮಾರ್ಚ್‌ 1ರಿಂದ ಗ್ರಾಮ ಪಂಚಾಯಿತಿಗಳ ವಿವಿಧ ಶ್ರೇಣಿಯ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಗೆ ಆದೇಶಿಸಲಾಗಿತ್ತು. ಆದರೆ, ₹ 518 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ನೌಕರರ ಸಂಬಳಕ್ಕೆ ಒಟ್ಟು ₹ 900 ಕೋಟಿ ಬೇಕಾಗುತ್ತದೆ. ಕಡಿಮೆ ಬೀಳುವ ₹ 382 ಕೋಟಿ ಬಿಡುಗಡೆಗೆ ಒತ್ತಾಯಿಸಲಾಗಿತ್ತು. ಈಗ ಸರ್ಕಾರವು ₹ 250 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಕಡಿಮೆ ಬೀಳುವ ಮೊತ್ತವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಶೇ. 6ರ ಅನುದಾನದಲ್ಲಿ (₹ 82) ಮತ್ತು 15ನೇ ಹಣಕಾಸಿನ ಕುಡಿಯುವ ನೀರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ವಾಟರ್‌ಮನ್‌ಗಳು ಮತ್ತು ಸ್ವಚ್ಛತಾಗಾರರಿಗೆ (ಸ್ವೀಪರ್ಸ್‌) ವೇತನ ನೀಡಲು ಆದೇಶಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಇದಕ್ಕಾಗಿ ಜಿಲ್ಲಾವಾರು ಅನೇಕ ಹೋರಾಟಗಳನ್ನು ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಸಂಘವು ಸರ್ಕಾರ ಮತ್ತು ಆರ್.ಡಿ.ಪಿ.ಆರ್. ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಅತೀಕ್‌ ಹಾಗೂ ಉಮಾ ಮಹಾದೇವನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು