ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 'ಎಸ್ಸೆಸ್ಸೆಲ್ಸಿ ಪರೀಕ್ಷೆ: ಭಯ ಬೇಡ, ಭರವಸೆ ಇರಲಿ'

ಫಲಿತಾಂಶ ಸುಧಾರಣೆಗೆ ಹಲವು ಕ್ರಮ ಕೈಗೊಂಡ ಶಿಕ್ಷಣ ಇಲಾಖೆ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಯತ್ನ
Published 20 ಮಾರ್ಚ್ 2024, 15:26 IST
Last Updated 20 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ಬೆಳಗಾವಿ: ಸರಿಯಾದ ಸಮಯಕ್ಕೆ ನಿದ್ರೆ, ಸಕಾಲಕ್ಕೆ ಓದು, ನಿಯಮಿತವಾಗಿ ಊಟ; ಇವು ಎಲ್ಲವನ್ನೂ ಸರಿಯಾಗಿ ಪಾಲಿಸಿದರೆ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಂಡ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರು ನೀಡಿದ ಸಲಹೆ.

‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ಇದೀಗ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಇದು ಸರಿಯಾದ ಸಮಯ. ವರ್ಷಪೂರ್ತಿ ಅಭ್ಯಾಸ ಮಾಡಿದ ಮಕ್ಕಳಿಗೆ ಪರೀಕ್ಷೆ ಬಂದಾಕ್ಷಣ ತುಸು ಗೊಂದಲ ಮೂಡುವುದು ಸಹಜ. ಆದರೆ, ಶಿಕ್ಷಕರು, ಪಾಲಕರು, ಮಾರ್ಗದರ್ಶಕರು ಅವುಗಳನ್ನು ಬಗೆಹರಿಸಬೇಕು. ಪರೀಕ್ಷೆ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಮೇಲಾಗಿ, ವಿದ್ಯಾರ್ಥಿಗಳು ತಮ್ಮ ಸಮಯ ಪಾಲನೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳದೇ ಮುಂದುವರಿಯುವುದು ಮುಖ್ಯ ಎಂಬುದು ಅವರ ಸಲಹೆ.

ಕೊನೆಯ ಹಂತದ ಸಿದ್ಧತೆ ಹೇಗಿರಬೇಕು ಎಂಬುದನ್ನು ಮಕ್ಕಳು ತಿಳಿಯಬೇಕು. ವರ್ಷವಿಡೀ ಓದಿದ ವಿಷಯಗಳನ್ನು ಈಗ ಪುನರ್‌ ಮನನ (ರಿವಿಜನ್‌) ಮಾಡಬೇಕು. ಹೊಸ ವಿಷಯಗಳನ್ನು ಓದಿ ಗೊಂದಲಕ್ಕೆ ಒಳಗಾಗಬಾರದು. ಹಳೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ, ಪರೀಕ್ಷಾ ವಿಧಾನ ಸರಿಯಾಗಿ ಅರಿತುಕೊಳ್ಳಬೇಕು ಎಂದಿದ್ದಾರೆ.

ಪರೀಕ್ಷೆ ದಿನದಂದು ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ಕ್ಲಿಷ್ಟಕರವಾದ ಪ್ರಶ್ನೆಗಳನ್ನು ನೋಡಿ ಆತಂಕಕ್ಕೆ ಒಳಗಾಗಬಾರದು. ಮೊದಲು ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ಬರೆಯಬೇಕು. ಸುಲಭ, ಸ್ವಲ್ಪ ಕಠಿಣ ಮತ್ತು ಕಠಿಣ ಹೀಗೆ... ಅನುಕ್ರಮವಾಗಿ ಪ್ರಶ್ನೆಗಳಿಗೆ ಉತ್ತರಿಸಬೇಕು. ಆಗ ನಿಮ್ಮಲ್ಲೇ ವಿಶ್ವಾಸ ಮೂಡುತ್ತ ಹೋಗುತ್ತದೆ ಎಂದರು.

ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ, ಕೆಲವೊಂದಕ್ಕೆ ನಿರ್ಬಂಧ ವಿಧಿಸಲಾಗಿರುತ್ತದೆ. ಆ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ. ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಹಿಂದಿನ ದಿನ ರಾತ್ರಿಯೇ ಮಾಡಿಕೊಳ್ಳಬೇಕು. ತಡರಾತ್ರಿಯವರೆಗೂ ಓದಲು ಕುಳಿತು ಬೆಳಿಗ್ಗೆ ಪರೀಕ್ಷೆಗೆ ಹೋಗುವುದು ಸರಿಯಾದ ಕ್ರಮವಲ್ಲ. ನಿದ್ರೆ ಚೆನ್ನಾಗಿ ಮಾಡಿದರೆ ನೆನಪಿನ ಶಕ್ತಿ ಇರುತ್ತದೆ. ಮನಸ್ಸು ಉಲ್ಲಾಸಗೊಂಡು ಪರೀಕ್ಷೆ ಬರೆಯಬಹುದು ಎಂದೂ ಅವರು ಯಶಸ್ಸಿನ ಉಪಾಯಗಳನ್ನು ಹೇಳಿದ್ದಾರೆ.

‘ನಿತ್ಯ 7 ಗಂಟೆ ನಿದ್ರಿಸುವುದರ ಜತೆಗೆ, ಪೌಷ್ಟಿಕವಾದ ಆಹಾರ ಸೇವಿಸಿ. ದೇಹಕ್ಕೆ ದನಿವಾಗದಂಥ ಸಣ್ಣ–ಪುಟ್ಟ ವ್ಯಾಯಾಮ ಮಾಡಿ, ಒತ್ತಡದಿಂದ ಮುಕ್ತರಾಗಬೇಕು. ಧ್ಯಾನವೂ ಇರಲಿ. ಈಗ ಬಿಸಿಲಿನ ಝಳ ಹೆಚ್ಚಾಗಿದೆ. ನಿರ್ಜಲೀಕರಣ ಸಮಸ್ಯೆ ಆಗದಂತೆ ನಿಯಮಿತವಾಗಿ ನೀರು ಕುಡಿಯಬೇಕು ಎಂದೂ ಅವರು ತಿಳಿಸಿದ್ದಾರೆ.

ಇನ್ನಷ್ಟು ಆಪ್ತವಾದ ಇಲಾಖೆ:

ವಿದ್ಯಾರ್ಥಿ ಜೀವನದ ಮಹತ್ವದ ಕಾಲಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆ. ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಾಲ್ಕೇ ದಿನ ಬಾಕಿ ಉಳಿದಿದ್ದು, ವಿದ್ಯಾರ್ಥಿಗಳು ಕೊನೆಯ ಹಂತದ ತಯಾರಿ ನಡೆಸಿದ್ದಾರೆ. ಬಿಡುವಿಲ್ಲದೆ ವಿವಿಧ ವಿಷಯಗಳ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಆಯಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಸಹ ಪ‍ರೀಕ್ಷೆ ಫಲಿತಾಂಶ ಸುಧಾರಣೆಗೆ ಕಸರತ್ತು ನಡೆಸಿದ್ದಾರೆ. ಮಕ್ಕಳೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದು ಇನ್ನಷ್ಟು ಆಪ್ತವಾಗುತ್ತಿದ್ದಾರೆ.

ಬೆಳಗಾವಿಯು ಎರಡು ಶೈಕ್ಷಣಿಕ ಜಿಲ್ಲೆ ಒಳಗೊಂಡಿದೆ. ಬೆಳಗಾವಿಯಲ್ಲಿ 34,134, ಚಿಕ್ಕೋಡಿಯಲ್ಲಿ 46,564 ಸೇರಿದಂತೆ 80,698 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ಶೈಕ್ಷಣಿಕ ವರ್ಷ ಬೆಳಗಾವಿ ಶೇ 85ರಷ್ಟು ಹಾಗೂ ಚಿಕ್ಕೋಡಿ ಶೇ 91ರಷ್ಟು ಫಲಿತಾಂಶ ದಾಖಲಿಸಿತ್ತು. ಈ ಬಾರಿ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಕನಿಷ್ಠ ಶೇ 5ರಷ್ಟು ಫಲಿತಾಂಶ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಗಡಿಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ, ಮರಾಠಿ ಮತ್ತು ಉರ್ದು ಮಾಧ್ಯಮದ ಪ್ರೌಢಶಾಲೆಗಳಿವೆ. ವಿವಿಧ ಮಾಧ್ಯಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಗೊಳಿಸುವ ಪ್ರಯತ್ನ ನಡೆದಿದೆ. ಆಯಾ ಪ್ರೌಢಶಾಲೆಗಳ ಶಿಕ್ಷಕರು, ಸ್ವತಃ ಮಕ್ಕಳಿಗೆ ಕರೆ ಮಾಡಿ ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

‘ಪರೀಕ್ಷಾ ಶುಲ್ಕ ಭರಿಸದ ಮಕ್ಕಳಿಗೆ ಕೆಲವು ಖಾಸಗಿ ಶಾಲೆಗಳು ಒತ್ತಡ ಹೇರಿದ್ದು ಹಿಂದೆ ಕಂಡುಬಂದಿತ್ತು. ಮಕ್ಕಳಿಗೆ ಪ್ರವೇಶ ಪತ್ರವನ್ನೂ ನೀಡಿರಲಿಲ್ಲ. ಈ ಬಾರಿ ಅಂಥ ಯಾವುದೇ ಕ್ರಮಕ್ಕೆ ಆಸ್ಪದ ಕೊಟ್ಟಿಲ್ಲ. ಎಲ್ಲ ಮಕ್ಕಳಿಗೂ ಪರೀಕ್ಷೆಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ’ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಮಾಹಿತಿ ನೀಡಿದ್ದಾರೆ.

ನಿತೇಶ್‌ ಪಾಟೀಲ
ನಿತೇಶ್‌ ಪಾಟೀಲ
ಮೋಹನಕುಮಾರ ಹಂಚಾಟೆ
ಮೋಹನಕುಮಾರ ಹಂಚಾಟೆ
ಗೋಕಾಕ ವಲಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚೈತನ್ಯ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು
ಗೋಕಾಕ ವಲಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚೈತನ್ಯ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯೊಬ್ಬರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು
ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ
ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ
ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು
ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು
ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಸಿದ್ಧಪಡಿಸಿದ ಕೈಪಿಡಿ ಲೋಕಾರ್ಪಣೆ
ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಸಿದ್ಧಪಡಿಸಿದ ಕೈಪಿಡಿ ಲೋಕಾರ್ಪಣೆ

ಫಲಿತಾಂಶ ಸುಧಾರಣೆಗೆ ಕ್ರಮ * ಬೆಳಗಾವಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಮಾಧ್ಯಮವಾರು ಮತ್ತು ವಿಷಯವಾರು ವೇದಿಕೆಯ ಕಾರ್ಯ ಚಟುವಟಿಕೆಗಳನ್ನು 2023ರ ಜೂನ್‌ನಿಂದಲೇ ಆರಂಭಿಸಲಾಗಿದೆ. * ತರಗತಿಯಲ್ಲಿ ಸಾಮರ್ಥ್ಯ ಆಧರಿತ ಕಲಿಕಾ ಗುಂಪುಗಳ ತಯಾರಿ ಜತೆಗೆ ಶೈಕ್ಷಣಿಕ ದತ್ತು ಯೋಜನೆ ಅನುಷ್ಠಾನ ಮಾಡಲಾಗಿದೆ. * ವಿಷಯವಾರು ಗುಂಪು ಅಧ್ಯಯನ ಮಾಡಲಾಗಿದೆ. * ಪ್ರತಿ ಶನಿವಾರ ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗಿದೆ. * ವಿಷಯ ಶಿಕ್ಷಕರ ನೇತೃತ್ವದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪುಗಳನ್ನು ರಚಿಸಿ ಮಕ್ಕಳ ಶೈಕ್ಷಣಿಕ ಗೊಂದಲಗಳನ್ನು ತ್ವರಿತವಾಗಿ ಬಗೆಹರಿಸಲಾಗುತ್ತಿದೆ. * ನಕಲು ರಹಿತ ಪರೀಕ್ಷೆ ನಡೆಸುವುದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಿರಂತರ ಅರಿವು ಮೂಡಿಸಲಾಗುತ್ತಿದೆ. * ವಿದ್ಯಾರ್ಥಿಗಳ ಪಾಲಕರ ಮನೆಗೆ ಶಿಕ್ಷಕರು ನಿಯಮಿತವಾಗಿ ಭೇಟಿ ಕೊಟ್ಟು ಪಾಲಕರಿಗೂ ತಿಳಿವಳಿಕೆ ನೀಡಲಾಗುತ್ತಿದೆ. * ಶಾಲೆಗಳಲ್ಲಿ ‌ಅನುಭವಿ ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. * ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಿದ್ಧಗೊಳಿಸಲಾಗುತ್ತಿದೆ. * ಕಳೆದ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿ ಮಕ್ಕಳ ನಿದರ್ಶನಕ್ಕೆ ತರಲಾಗುತ್ತಿದೆ. * ಕಳೆದ ಐದು ವರ್ಷಗಳ ಮಾದರಿ ಪ್ರಶ್ನೆಪತ್ರಿಕೆ ಬಿಡಿಸುವ ಜತೆಗೆ ಪಾಸಿಂಗ್‌ ಪ್ಯಾಕೇಜ್‌ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. * ವಿಷಯ ತಜ್ಞರ ನೆರವಿನೊಂದಿಗೆ ತಾಲ್ಲೂಕು ಹಂತಗಳಲ್ಲಿ ನೇರ ಫೋನ್‌ ಇನ್‌ ಕಾರ್ಯಕ್ರಮಗಳನ್ನು ಮಾಡಲಾಗಿದೆ. * 2024ರ ಫೆಬ್ರುವರಿಯಲ್ಲಿ ಪ್ರತಿ ಶನಿವಾರ ವಿಷಯವಾರು ಮತ್ತು ಮಾಧ್ಯಮವಾರು ನೇರ ಫೋನ್‌ ಇನ್‌ ಕಾರ್ಯಕ್ರಮ ನಡೆಸಲಾಗಿದೆ. * ಕೇಂದ್ರವಾರು ವಿದ್ಯಾರ್ಥಿಗಳನ್ನು ಸೇರಿಸಿ ಪಿಕ್ನಿಕ್‌ ಫಜಲ್‌ ಏರ್ಪಡಿಸಲಾಗುತ್ತಿದೆ. * ಶಾಲಾ ಹಂತದಲ್ಲಿ ಸರಣಿ ಪರೀಕ್ಷೆ ನಡೆಸಿ ಫಲಿತಾಂಶ ವಿಶ್ಲೇಷಿಸಲಾಗಿದೆ. * ಪ್ರಶ್ನೆಪತ್ರಿಕೆಗಳ ನೀಲನಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ಸಮರ್ಪಕ ಬಸ್‌ ವ್ಯವಸ್ಥೆಗೆ ಸೂಚನೆ ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಅವಧಿಗೆ ಪೂರಕವಾಗಿ ಸಮರ್ಪಕವಾಗಿ ಬಸ್‌ ಸೌಕರ್ಯ ಕಲ್ಪಿಸಬೇಕು. ಗಡಿಭಾಗದಲ್ಲಿ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಕಡೆ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಅವರೂ ಪ್ರತಿಕ್ರಿಯಿಸಿದ್ದಾರೆ. *ಅಕ್ರಮಕ್ಕೆ ಅವಕಾಶವೇ ಇಲ್ಲ: ಹಂಚಾಟೆ ‘ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅಕ್ರಮ ರಹಿತವಾಗಿ ನಡೆಸುವುದೇ ನಮ್ಮ ಉದ್ದೇಶ. ಇದಕ್ಕಾಗಿ ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳಲ್ಲಿ ದಾಖಲಾಗುವ ದೃಶ್ಯಾವಳಿ ವೀಕ್ಷಿಸಲು ಪ್ರತಿ ತಾಲ್ಲೂಕಿನಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ವಹಿಸಿದ್ದೇವೆ’ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ್‌ ಹಂಚಾಟೆ ತಿಳಿಸಿದ್ದಾರೆ. ‘ಮೊದಲು ವರ್ಷಕ್ಕೆ ಒಂದೇ ವಾರ್ಷಿಕ ಪರೀಕ್ಷೆ ಇರುತ್ತಿತ್ತು. ಆದರೆ ಈಗ ಪೂರಕ ಪರೀಕ್ಷೆ ಪರಿಕಲ್ಪನೆಯೇ ಇಲ್ಲ. ವಿದ್ಯಾರ್ಥಿಗಳು ವರ್ಷಕ್ಕೆ ಮೂರು ಪರೀಕ್ಷೆ ಎದುರಿಸಬಹುದು. ಇದು ಮಕ್ಕಳ ಸ್ನೇಹಿ ಪರೀಕ್ಷೆ. ಈ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಶೈ.ಜಿಲ್ಲೆ;ಪ್ರೌಢಶಾಲೆಗಳು;‍ಪರೀಕ್ಷಾ ಕೇಂದ್ರಗಳು;ವಿದ್ಯಾರ್ಥಿಗಳು ಬೆಳಗಾವಿ;508;96;34134 ಚಿಕ್ಕೋಡಿ;600;128;46564 ಒಟ್ಟು;1108;224;80698

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT