ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಕ್ಕೆ ಅಪಾಯವಾಗುತ್ತದೆಂದು ತನ್ನೆಸರಿಗೆ ಬರೆಸಿಕೊಂಡಿದ್ದ!

ಕೆ.ಕಲ್ಯಾಣ್ ಪತ್ನಿ, ಕುಟುಂಬದವರಿಗೆ ವಂಚನೆ ಪ್ರಕರಣ
Last Updated 12 ಅಕ್ಟೋಬರ್ 2020, 9:01 IST
ಅಕ್ಷರ ಗಾತ್ರ

ಬೆಳಗಾವಿ: ‘ಚಲನಚಿತ್ರ ಗೀತರಚನೆಕಾರ ಕೆ.ಕಲ್ಯಾಣ್ ಪತ್ನಿ, ಅತ್ತೆ ಹಾಗೂ ಮಾವಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಾನಂದ ವಾಲಿಯಿಂದ ₹ 6 ಕೋಟಿಗೂ ಹೆಚ್ಚಿನ ಮೌಲ್ಯದ ನಿವೇಶನ, ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಆಭರಣ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದರು.

ಇಲ್ಲಿನ ಮಾಳಮಾರುತಿ ಠಾಣೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಆಸ್ತಿ–ಚಿನ್ನಾಭರಣ ನಿಮ್ಮ‌ ಬಳಿ ಇದ್ದರೆ ಪ್ರಾಣಕ್ಕೆ ಕಂಟಕವಾಗಲಿದೆ ಎಂದು ಹೆದರಿಸಿ ಆರೋಪಿಯು ತನ್ನ ಹೆಸರಿಗೆ ಬರೆಸಿಕೊಂಡಿದ್ದ. ಮೈಮೇಲೆ ದೇವರು ಬಂದಂತೆ ಮಾಡಿ, ದೇವರು ಈ ವಿಷಯ ತಿಳಿಸುತ್ತಿದೆ ಎಂದು ಆ ಕುಟುಂಬದವರನ್ನು ನಂಬಿಸಿದ್ದ ಎನ್ನುವುದು ತನಿಖೆಯಿಂದ ಹೊರಬಿದ್ದಿದೆ’ ಎಂದು ಮಾಹಿತಿ ನೀಡಿದರು.

ಹಲವು ವಿಷಯ ಬೆಳಕಿಗೆ:‘ಕಲ್ಯಾಣ್ ಅವರು ಪತ್ನಿ, ಅತ್ತೆ ಹಾಗೂ ಮಾವನನ್ನು ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ ಗಂಗಾ ಕುಲಕರ್ಣಿಯು ಶಿವಾನಂದ ಎನ್ನುವವರ ಮೂಲಕ ಅಪಹರಿಸಿ ವಂಚಿಸಿದ್ದಾರೆ’ ಎಂದು ಸೆ. 30ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಶಿವಾನಂದನಿಂದ 10 ಮ್ಯಾಕ್ಸಿ ಕ್ಯಾಬ್‌ಗಳು (ಮಾಡಿಫೈಡ್‌), 350 ಗ್ರಾಂ. ಚಿನ್ನ ಹಾಗೂ 6 ಕೆ.ಜಿ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆತನ ಹೆಸರಿಗೆ ಮಾಡಿಸಿಕೊಂಡಿದ್ದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಮೊದಲಾದ ಕಡೆಗಳಲ್ಲಿರುವ ಕಲ್ಯಾಣ್ ಪತ್ನಿ ಕುಟುಂಬದ ₹ 5 ಕೋಟಿಗೂ ಹೆಚ್ಚಿನ ಬೆಲೆ ಬಾಳುವ ಆಸ್ತಿಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ತಿಳಿಸಿದರು.

ಪೂಜೆ ಮಾಡಿಸಲೆಂದು:‘ಗಂಗಾ ಕುಲಕರ್ಣಿ ಮೂಲಕ ಆ ಕುಟುಂಬದಲ್ಲಿ ಮನಸ್ತಾಪ ಬರುವಂತೆ ಮಾಡಿದ್ದರು. ಪತಿ ಕಲ್ಯಾಣ್‌ರಿಂದ ಪ್ರಾಣಕ್ಕೆ ತೊಂದರೆ ಇದೆ ಎಂದೂ ಅಶ್ವಿನಿ ಹಾಗೂ ಅವರ ತಂದೆ–ತಾಯಿಯನ್ನು ಪುಸಲಾಯಿಸಿದ್ದರು. ಪೂಜೆ ಮಾಡಿಸಿದರೆ ಸಂಕಟ ನಿವಾರಣೆಯಾಗುತ್ತದೆ ಎಂದು ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ಆಕೆ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ. ಆರೋಪಿಗಳಿಗೆ ಹಲವರು ಸಹಾಯ ಮಾಡಿದ್ದಾರೆ. ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಸಿಪಿಐ ಬಿ.ಆರ್. ಗಡ್ಡೇಕರ ಇದ್ದರು.

ವಾಮಾಚಾರ ಪ್ರತಿಬಂಧಕ ಕಾಯ್ದೆಯಲ್ಲಿ...

‘ಈ ಪ್ರಕರಣವನ್ನು ಕರ್ನಾಟಕ ಅಮಾನವೀಯ, ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ಪ್ರತಿಬಂಧಕ ಹಾಗೂ ನಿರ್ಮೂಲನಾ ಕಾಯ್ದೆ ಅಡಿ ಒಳಪಡಿಸಲು ಕ್ರಮ ಕೈಗೊಂಡಿದ್ದೇವೆ. ಇಂತಹ ಪ್ರಕರಣ ನಗರದಲ್ಲಿ ಇದೇ ಮೊದಲನೆಯದ್ದಾಗಲಿದೆ’ ಎಂದು ಡಿಸಿಪಿ ತಿಳಿಸಿದರು.

‘ಕೌಟುಂಬಿಕ ಕಲಹದ ಪ್ರಕರಣ ಇದಾಗಿದ್ದರಿಂದ, ಕಲ್ಯಾಣ್ ಪತ್ನಿ ಅಶ್ವಿನಿ ಅವರಿಗೆ ಆಪ್ತಸಮಾಲೋನೆ ಮಾಡಿಸಲಾಯಿತು. ಮೋಸ ಹೋಗಿರುವುದು ಅವರಿಗೆ ಮನವರಿಕೆಯಾಗಿದೆ. ಆ ಕುಟುಂಬದವರು ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ’ ಎಂದರು.

ಯಾರನ್ನಾದರೂ ಮನೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಾಪರ ವಿಚಾರಿಸಬೇಕು. ಮಾಟ–ಮಂತ್ರದ ಹೆಸರಿನಲ್ಲಿ ಬೆದರಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು
-ವಿಕ್ರಮ್ ಅಮಟೆ,ಡಿಸಿಪಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT