ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಮುಂದುವರಿದ ಮಳೆ: ಕೃಷ್ಣೆಯಲ್ಲಿ 1.27 ಲಕ್ಷ ಕ್ಯುಸೆಕ್ ನೀರು

Published 25 ಜುಲೈ 2023, 9:33 IST
Last Updated 25 ಜುಲೈ 2023, 9:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಮಂಗಳವಾರವೂ ಮಳೆ ಮುಂದುವರಿದಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಎಲ್ಲ ನದಿಗಳಲ್ಲಿ  ನೀರಿನ ಮಟ್ಟ ಏರಿಕೆಯಾಗಿದೆ. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲ್ಲೂಕಿನ ನದಿತೀರದ ಗ್ರಾಮಗಳ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ವಿಜಯಪುರ ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ವೃದ್ಧೆ ಶಿವಮ್ಮ ನೂರುಂದಪ್ಪ ಸಾವಳಗಿ (85) ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಗುತ್ತಲದ ಮಾಳಾಪುರದಲ್ಲಿ ಮಳೆಗೆ ಮನೆ ಕುಸಿದು ಗಾಯಗೊಂಡಿದ್ದ ಭಾಗ್ಯ ಮಲ್ಲಪ್ಪ ಚಳ್ಳಮರದ (3) ಎಂಬ ಬಾಲಕಿ ಮೃತಪಟ್ಟಿದ್ದಾಳೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿ ಕೃಷ್ಣಾ ನದಿಗೆ ಮಂಗಳವಾರ ಮಧ್ಯಾಹ್ನ 1.27 ಲಕ್ಷ ಕ್ಯುಸೆಕ್ ನೀರು ಹರಿದುಬಂದಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದಿದ್ದು ಕೃಷ್ಣಾ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾದಲ್ಲಿ ಹರಿವು ಹೆಚ್ಚಾಗಿದೆ.

ದೂಧಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನದಿದಡದ ರೈತರು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಎರಡು ದಿನಗಳ ಹಿಂದೆ ಮುಳುಗಡೆಯಾಗಿದ್ದ ಎಲ್ಲ 21 ಸೇತುವೆಗಳಲ್ಲಿ ಸಂಚಾರ ಇನ್ನೂ ಆರಂಭವಾಗಿಲ್ಲ.

ಹುಬ್ಬಳ್ಳಿ ನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ ಬಿರುಸಾಗಿ ಮಳೆಯಾಗಿದೆ. ಗಾಳಿ, ಮಳೆಗೆ ಒಟ್ಟು 129 ಮನೆಗಳಿಗೆ ಹಾನಿಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದರೂ ಅಘನಾಶಿನಿ, ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಸ್ಥಿರವಾಗಿದೆ. ಪ್ರವಾಹದ ಸ್ಥಿತಿ ಮುಂದುವರೆದಿದೆ. ಕುಮಟಾ ಹಾಗೂ ಹೊನ್ನಾವರ ಸೇರಿ ಐದು ಕಡೆ ಕಾಳಜಿ ಕೇಂದ್ರ ತೆರೆಯಲಾಗಿದ್ದು, 191 ಜನರು ಅಲ್ಲಿ ಆಶ್ರಯ ಪಡೆದಿದ್ದಾರೆ.

ಅಘನಾಶಿನಿ ನದಿಯ ಪ್ರವಾಹದಿಂದ ಮಣಕಿ, ದೀವಗಿ, ಹೆಗಡೆ ಗ್ರಾಮಗಳ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹೊನ್ನಾವರದ ಗುಂಡಬಾಳ ನದಿ ಉಕ್ಕಿ ಹರಿಯುತ್ತಿದೆ. ಗಂಗಾವಳಿ ನದಿಯೂ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಬಿಳಿಹೊಯ್ಗೆ, ಕೊಡಸಾಣಿ, ವಾಸರಕುದ್ರಿಗೆ ಮತ್ತು ಹಲವು ಪ್ರದೇಶಗಳಲ್ಲಿ ಪ್ರವಾಹ ಸಮಸ್ಯೆ ತಲೆದೋರಿದೆ. ಜೊಯಿಡಾ ಭಾಗದಲ್ಲಿ ಮಳೆ ಇಳಿಕೆಯಾಗಿದ್ದರಿಂದ ಕಾಳಿನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಸೂಪಾ ಜಲಾಶಯಕ್ಕೆ 43 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ನಿರಂತರ ಮಳೆಗೆ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ವರದಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ಗುಡ್ನಾಪುರ ಕೆರೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಕೆರೆ ತಟದಲ್ಲಿರುವ ಬಂಗಾರೇಶ್ವರ ದೇವಸ್ಥಾನ ಜಲಾವೃತವಾಗುವ ಹಂತದಲ್ಲಿದೆ.

ವಿಜಯನಗರ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಸುರಿದಿದ್ದು, ಕೂಡ್ಲಿಗಿ ತಾಲ್ಲೂಕಿನಲ್ಲಿ 10, ಕೊಟ್ಟೂರು ತಾಲ್ಲೂಕಿನಲ್ಲಿ 7, ಕಾನಹೊಸಹಳ್ಳಿ ಭಾಗದಲ್ಲಿ 6 ಮನೆಗಳ ಸಹಿತ ಒಟ್ಟು 23 ಮನೆಗಳು ಭಾಗಶಃ ಕುಸಿದಿವೆ. ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಸುಮಾರು 60 ಎಕರೆ ಭತ್ತದ ಗದ್ದೆಗೆ ಮಳೆನೀರು ನುಗ್ಗಿ ಬೆಳೆ ನಾಶವಾಗಿದೆ. ಹೊಸಪೇಟೆಯ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 66,250 ಕ್ಯುಸೆಕ್‌ಗೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT