ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ; ಮನೆ–ಮಳಿಗೆಗಳಿಗೆ ನುಗ್ಗಿದ ನೀರು

ನೀರಿನಿಂದ ಮುಚ್ಚಿದ ರಸ್ತೆಗಳು; ಕೆರೆಗಳಂತಾದ ಹೊಲ–ಗದ್ದೆಗಳು
Last Updated 3 ಆಗಸ್ಟ್ 2019, 15:04 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಇಡೀ ದಿನ ಎಡೆಬಿಡದೇ ಸುರಿದ ಭಾರಿ ಮಳೆಯಿಂದ ಮನೆ ಹಾಗೂ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿದೆ.

ಇಲ್ಲಿನ ಹೊಸ ಹಾಗೂ ಹಳೇ ಗಾಂಧಿ ನಗರ, ಓಂ ನಗರ, ಅನ್ನಪೂರ್ಣೇಶ್ವರಿ ನಗರ, ಯಳ್ಳೂರ ರಸ್ತೆ, ಕೊನವಾಳ ಗಲ್ಲಿ, ಪೀರಣವಾಡಿ ಸೇರಿ ವಿವಿಧೆಡೆ ಮಳೆ ನೀರು ಮನೆಗಳಲ್ಲಿ ತುಂಬಿಕೊಂಡಿತ್ತು. ಚರಂಡಿಗಳು ತುಂಬಿ ಹರಿದಿದ್ದರಿಂದ ಆ ನೀರು ಕೂಡ ಮನೆಗಳಿಗೆ ನುಗ್ಗಿತ್ತು. ಇದರಿಂದ ಕೆಲವೆಡೆ ಮನೆಯಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿದೆ. ನಿವಾಸಿಗಳು ನೀರು ಹೊರಹಾಕಿದರೂ ಮಳೆಯಿಂದ ಮತ್ತೆ ನೀರು ಒಳಬರುತ್ತಿತ್ತು.

ಅಂಗನವಾಡಿಗೆ ನುಗ್ಗಿದ ನೀರು:ಇಲ್ಲಿನ ಸಮರ್ಥ ನಗರದ ಅಂಗನವಾಡಿಗೆ ನೀರು ನುಗ್ಗಿದ್ದರಿಂದ ಆತಂಕ ಸೃಷ್ಠಿಯಾಗಿತ್ತು. ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಕಾರ್ಯಕರ್ತೆ ಹಾಗೂ ಸಹಾಯಕಿ ನೀರನ್ನು ಹೊರ ಹಾಕಲು ಹರಸಾಹಸ ಮಾಡಿದರು.

ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಸುರಿಯುತ್ತಿರುವ ಮಳೆ ಹಾಗೂ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಬೇಕಾಯಿತು. ಮಳೆಯಿಂದಾಗಿ ಖಾನಾಪುರ ರಸ್ತೆ ಹಾಗೂ ಇನ್ನಿತರೆಡೆ ರಸ್ತೆಗಳ ಡಾಂಬರ ಕಿತ್ತು ಮೇಲೆ ಬಂದಿದೆ.

ಹೊಲ–ಗದ್ದೆಗಳು ಜಲಾವೃತ: ಧಾರಾಕಾರ ಮಳೆಯಿಂದ ಹೊಲಗದ್ದೆಗಳು ಜಲಾವೃತವಾಗಿವೆ.ಮಾರ್ಕಂಡೇಯ ನದಿ ನೀರು ಅಕ್ಕಪಕ್ಕದ ಹೊಲ–ಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಮುಳುಗಡೆಯಾಗಿವೆ. ಕಬ್ಬಿನ ಗದ್ದೆಗಳಲ್ಲಿ 4 ರಿಂದ 5 ಅಡಿ ನೀರು ನಿಂತಿದೆ. ಬಳ್ಳಾರಿ ನಾಲಾದ ನೀರಿನಿಂದ ಗಾಂಧಿ ನಗರ ಹಾಗೂ ಹಲಗಾ ಬಳಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಹೊಲ–ಗದ್ದೆಗಳು ಕೆರೆಗಳಂತಾಗಿದ್ದು, ಭತ್ತ ಹಾಗೂ ಇನ್ನಿತರ ಬೆಳೆಗಳು ನಾಶವಾಗಿವೆ. ಯಳ್ಳೂರ ರಸ್ತೆಯ ಹೊಲಗಳಲ್ಲೂ ನೀರು ನಿಂತಿದೆ. ಗಾಳಿ–ಮಳೆಗೆ ಕೆಲವೆಡೆ ಗಿಡ–ಮರಗಳು ಬಿದ್ದಿವೆ.

‘ನೀರು ನಿಲ್ಲುವುದರಿಂದ ಕಬ್ಬು ಹಾಗೂ ಭತ್ತದ ಬೆಳೆಗೆ ಯಾವುದೇ ಹಾನಿಯಾಗುವುದಿಲ್ಲ. ಇನ್ನಿತರ ಬೆಳೆಗಳು ಹಾನಿಯಾಗಿದೆಯೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಮಳೆ ಕಡಿಮೆಯಾಗಿ, ಸರ್ವೇ ಕೈಗೊಂಡ ನಂತರವೇ ಅದು ಗೊತ್ತಾಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT