ಮಂಗಳವಾರ, ಡಿಸೆಂಬರ್ 7, 2021
24 °C
ವಿಧಾನಪರಿಷತ್ ಮುಖ್ಯಸಚೇತಕ ಶ್ಲಾಘನೆ

ಸಹಕಾರ ಕ್ಷೇತ್ರದಿಂದ ಎಲ್ಲರಿಗೂ ಸಹಾಯ: ಕವಟಗಿಮಠ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಹಕಾರ ಕ್ಷೇತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈಚಾಚಿ ಸಹಾಯ ನೀಡುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಶ್ಲಾಘಿಸಿದರು.

ರಾಜ್ಯ ಸೌಹಾರ್ದ ಸಹಕಾರಿ ಬೆಳಗಾವಿ ಪ್ರಾಂತದ ಉದ್ಘಾಟನೆ ಅಂಗವಾಗಿ ಇಲ್ಲಿನ ನೆಹರೂ ನಗರದ ಕೆಪಿಟಿಸಿಎಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೆಳಗಾವಿ, ಬೈಲಹೊಂಗಲ, ಖಾನಾಪುರ, ರಾಮದುರ್ಗ, ಸವದತ್ತಿ, ಗೋಕಾಕ, ಮೂಡಲಗಿ, ಚನ್ನಮ್ಮ ಕಿತ್ತೂರು ಮತ್ತು ಯರಗಟ್ಟಿ ತಾಲ್ಲೂಕಗಳ ಸೌಹಾರ್ದ
ಸಹಕಾರಿಗಳ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘21ನೇ ಶತಮಾನದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಸಾಮರ್ಥ್ಯ ಸಹಕಾರ ಕ್ಷೇತ್ರದಲ್ಲಿದೆ. ಅದನ್ನು ಒರೆಗೆ ಹಚ್ಚುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ’ ಎಂದರು.

ವೆಚ್ಚಗಳಿಗೆ ಕಡಿವಾಣ ಹಾಕುತ್ತೇವೆ:

‘ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಸ್ಪರ್ಧಿಸಬೇಕಾದರೆ ಸಹಕಾರ ಸಂಸ್ಥೆಗಳ ಖರ್ಚು–ವೆಚ್ಚಗಳಿಗೆ ಕಡಿವಾಣ ಹಾಕಬೇಕು. ದಲ್ಲಾಳಿಗಳ ಹಸ್ತಕ್ಷೇಪ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಜನಧನ ಯೋಜನೆ ಮಾದರಿಯಲ್ಲಿ ಯೋಜನೆ ಜಾರಿಗೊಳಿಸಿ ಸಹಕಾರ ಕ್ಷೇತ್ರವನ್ನು ಇನ್ನೂ ಮೇಲೆತ್ತಬೇಕು. ಜನಪರ ಕೆಲಸ, ಸೇವೆ ನೀಡುವ ಉದ್ದೇಶ ಹೊಂದಿದ್ದರೆ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆಯಲು ಸಾಧ್ಯವಿದೆ’ ಎಂದು ತಿಳಿಸಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ‘ಮುಂಬರುವ ದಿನಗಳಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬದಲಾವಣೆ ಕಾಣಲಿದೆ. ಸಹಕಾರ ಕ್ರಾಂತಿಯ ಸಾಧ್ಯತೆ ನಿಚ್ಚಳವಾಗಿದೆ. ಪಾರದರ್ಶಕತೆ ಹೆಚ್ಚುವುದರಿಂದ ಪರಿಶ್ರಮಿ ಸಂಸ್ಥೆಗಳಿಗೆ ಅನುಕೂಲ ಆಗಲಿದೆ. ಶೋಷಿತ ಸಂಸ್ಥೆಗಳಿಗೆ ಮಾರಕವೂ ಆಗಲಿದೆ. ಹಾಗಾಗಿ ಸಹಕಾರ ಸಂಸ್ಥೆಗಳು ಈಗಿನಿಂದಲೇ ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ಮೂಲಕ ರೈತರು, ಬಡಜನರ ಏಳಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ:

ರಾಷ್ಟ್ರೀಯ ಸಹಕಾರ ಭಾರತಿ ಅಧ್ಯಕ್ಷ ರಮೇಶ ವೈದ್ಯ, ‘ಈ ಹಿಂದೆ ಸಂಕೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿಗದಿಪಡಿಸುತ್ತಿದ್ದ ಕಬ್ಬಿನ ದರ ಇಡೀ ರಾಜ್ಯಕ್ಕೆ ಮಾದರಿ ಆಗಿರುತ್ತಿತ್ತು. ಅಂತಹ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ಸಹಕಾರ ಕ್ಷೇತ್ರದಲ್ಲಿರಬೇಕು. ಕೆಲ ರಾಜಕಾರಣಿಗಳು ರಾಜಕೀಯ ಬೆಳವಣಿಗೆಗಾಗಿ ಸಹಕಾರ ಕ್ಷೇತ್ರವನ್ನು ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಕ್ಷೇತ್ರದಲ್ಲಿರುವವರು ಆತ್ಮಶುದ್ಧಿ ಮಾಡಿಕೊಂಡರೆ ಸಂಸ್ಥೆಗಳು ಉದ್ಧಾರವಾಗುತ್ತವೆ’ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಎಚ್.ಬಿ. ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಜಗದೀಶ ಕವಟಗಿಮಠ, ನಿರ್ದೇಶಕ ಲಕ್ಷ್ಮಣ ಪವಾರ ‍ಪಾಲ್ಗೊಂಡಿದ್ದರು.

ಪ್ರಧಾನ ವ್ಯವಸ್ಥಾಪಕ ಬಸವರಾಜ ಹೊಂಗಲ ಸ್ವಾಗತಿಸಿದರು. ಅಶ್ವಿನಿ ಕಮ್ಮಾರ ನಿರೂಪಿಸಿದರು. ಪ್ರತಿಭಾ ಮಠ ವಂದಿಸಿದರು.

ಪರಿಹಾರ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಹಕಾರ ಕ್ಷೇತ್ರ ಪರಿಹಾರ ಆಗಬೇಕು. ಮಾರುಕಟ್ಟೆ ಬೆಳವಣಿಗೆಗೆ ತಕ್ಕಂತೆ ಬೇಗ ಹೊಂದಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

–ಮಹಾಂತೇಶ ಕವಟಗಿಮಠ, ಮುಖ್ಯಸಚೇತಕ, ವಿಧಾನಪರಿಷತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು