ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ ಕಾಲೇಜಲ್ಲೂ ಹಿಜಾಬ್- ಕೇಸರಿ ಶಾಲು ಗೊಂದಲ

Last Updated 8 ಫೆಬ್ರುವರಿ 2022, 13:20 IST
ಅಕ್ಷರ ಗಾತ್ರ

ಸವದತ್ತಿ (ಬೆಳಗಾವಿ ಜಿಲ್ಲೆ): ಇಲ್ಲಿನ ಬಿ.ಜಿ. ಜೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಿರಂದ ಮಂಗಳವಾರ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ರಜೆ ನೀಡಲಾಯಿತು.

ಹಿಜಾಬ್ ಧರಿಸಿದ ಕೆಲ ವಿದ್ಯಾರ್ಥಿನಿಯರು ಎಂದಿನಂತೆ ತರಗತಿ ಪ್ರವೇಶಿಸಲು ಮುಂದಾಗಿದ್ದಾರೆ. ಆಗ, ಕೇಸರಿ ಶಾಲು ಧರಿಸಿದ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಘೋಷಣೆ ಹಾಕಲಾರಂಭಿಸಿದ್ದಾರೆ. ‘ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಬೇಕು. ಇಲ್ಲದಿದ್ದರೆ ನಾವೆಲ್ಲರೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಪ್ರಾಂಶುಪಾಲ ವಿ.ವಿ. ಕೋಳೇಕರ ಅವರು ಕಾಲೇಜಿಗೆ ರಜೆ ಘೋಷಿಸಿ ವಿದ್ಯಾರ್ಥಿಗಳನ್ನು ಮನೆಗೆ ತೆರಳಲು ಸೂಚಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪ್ರಮುಖರು ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದರು. ‘ಎಲ್ಲೋ ನಡೆದ ಘಟನೆ ಇಲ್ಲಿ ವ್ಯತಿರಿಕ್ತ ಪರಿಣಾಮ ಬೀರುವಂತೆ ಆಗಬಾರದು. ಸವದತ್ತಿಯಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇದ್ದೇವೆ. ವಿದ್ಯಾರ್ಥಿಗಳು ಕಲಿಕೆಗೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ನ್ಯಾಯಾಲಯದಿಂದ ತೀರ್ಪು ಬರಲಿದೆ. ಎಲ್ಲರಿಗೂ ಕಾನೂನು ಒಂದೇ. ಎಲ್ಲರೂ ತಮ್ಮ ತಮ್ಮ ಹಕ್ಕು ಕೇಳುತ್ತಿದ್ದಾರೆ. ಆದರೆ, ಭಾವೈಕ್ಯಕ್ಕೆ ಧಕ್ಕೆ ಬರುವಂತೆ ಯಾರೂ ನಡೆದುಕೊಳ್ಳಬಾರದು’ ಎಂದು ಮುಖಂಡ ಗಂಗಯ್ಯ ಅಮೋಘಿಮಠ ಕೋರಿದರು.

ಮುಖಂಡರಾದ ಬಸವರಾಜ ಅರಮನಿ, ರವಿ ದೊಡಮನಿ, ಮಂಜುನಾಥ ಪಾಚಂಗಿ, ತಾಹೀರ ಶೇಖ, ಜಾಕೀರ ಭಾಗೋಜಿಕೊಪ್ಪ, ಆಸೀಫ್ ಭಾಗೋಜಿಕೊಪ್ಪ, ವಾಸೀಮ ಮುಲ್ಲಾ, ಆಕೀಫ್ ಗಡಾದ, ಅಮೀರ ಗೋರಿನಾಯ್ಕ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದರು.

ಪಿಎಸ್‌ಐ ಶಿವಾನಂದ ಗುಡಗನಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT