ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮಕ್ಕಳಿಗೆ ₹ 3 ಕೋಟಿ ವೆಚ್ಚದಲ್ಲಿ ಹಾಸ್ಟೆಲ್

ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ
Last Updated 27 ಜನವರಿ 2021, 14:53 IST
ಅಕ್ಷರ ಗಾತ್ರ

ಗೋಕಾಕ: ‘ಕೆಎಂಎಫ್‌ಗೆ ಹಾಲು ಪೂರೈಸುತ್ತಿರುವ ರೈತರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಸತಿನಿಲಯ ನಿರ್ಮಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಬುಧವಾರ ಜಿಲ್ಲಾ ಹಾಲು ಒಕ್ಕೂಟ ಏರ್ಪಡಿಸಿದ್ದ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ತಂತ್ರಾಂಶ ಒಳಗೊಂಡಿರುವ ಟ್ಯಾಬ್‌ಲೆಟ್‌ಗಳು ಮತ್ತು ಒಕ್ಕೂಟದ ಕಲ್ಯಾಣ ನಿಧಿಯಿಂದ ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘ರೈತರ ಮಕ್ಕಳಿಗೆ ಅನುಕೂಲವಾಗಲೆಂದು ಕೆಎಂಎಫ್‌ನಿಂದ ₹ 1.50 ಕೋಟಿ ಮತ್ತು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ₹ 1.50 ಕೋಟಿ ಸೇರಿಸಿ ವಸತಿನಿಲಯ ನಿರ್ಮಿಸಲಾಗುವುದು. 100ರಿಂದ 150 ಮಕ್ಕಳಿಗೆ ಪ್ರಯೋಜನ ಸಿಗಲಿದೆ’ ಎಂದು ಹೇಳಿದರು.

‘ಕೆಎಂಎಫ್‌ ನಂದಿನಿ ಹಾಲಿಗೆ ರಾಜ್ಯವಲ್ಲದೇ ಅನ್ಯ ರಾಜ್ಯಗಳಲ್ಲಿಯೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಗ್ರಾಹಕರ ಮನೆ ಮಾತಾಗಿವೆ. ಜೊತೆಗೆ ದಿನನಿತ್ಯ ಗ್ರಾಹಕರಿಂದ ಅಧಿಕ ಬೇಡಿಕೆಗಳು ಬರುತ್ತಲೇ ಇವೆ. ದೇಶದಲ್ಲಿ ಸಹಕಾರಿ ಸ್ವಾಮ್ಯದ ಅಮೂಲ್ ನಂತರ ಕೆಎಂಎಫ್‌ನ ನಂದಿನಿ ಮೊದಲ ಸ್ಥಾನದಲ್ಲಿದೆ. ಮಾರುಕಟ್ಟೆಯನ್ನು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆ(ಕೆಸಿಸಿ)ಯಲ್ಲಿ ಪ್ರತಿ ಹಸುವಿಗೆ ಪ್ರತಿ ತಿಂಗಳಿಗೆ ₹ 7 ಸಾವಿರ ಮತ್ತು ಪ್ರತಿ ಎಮ್ಮೆಗೆ ತಿಂಗಳಿಗೆ ₹ 8 ಸಾವಿರವನ್ನು ಸಾಕಾಣಿಕೆಗಾಗಿ ಸಾಲ ನೀಡುತ್ತಿದೆ. ಈ ಸಾಲವನ್ನು ಒಕ್ಕೂಟಗಳಿಗೆ ಹಾಲು ಪೂರೈಸುತ್ತಿರುವ ಸಹಕಾರಿ ಸಂಘಗಳ ಸದಸ್ಯರಿಗೆ ನೀಡಲಾಗುತ್ತಿದೆ. ಈ ಸಾಲಕ್ಕೆ ಶೇ 9ರಷ್ಟು ಬಡ್ಡಿ ಇದ್ದು, ಅದರಲ್ಲಿ ಶೇ 2ರಷ್ಟು ಬಡ್ಡಿಯನ್ನು ಕೇಂದ್ರ ಮನ್ನಾ ಮಾಡಿದೆ. ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿ ಮಾಡುತ್ತಿರುವ ರೈತರಿಗೆ ಶೇ 3ರಷ್ಟು ಮನ್ನಾ ಮಾಡಲು ಸರ್ಕಾರ ಈಗಾಗಲೇ ಘೋಷಿಸಿದೆ. ಉಳಿದ ಶೇ 4ರಷ್ಟು ಫಲಾನುಭವಿಗಳೆ ಭರಿಸಬೇಕಾಗುತ್ತದೆ. ಕೆಲವೊಂದು ರಾಷ್ಟ್ರೀಕೃತ ಬಾಂಕ್‌ಗಳು ಪೂರ್ಣ ಪ್ರಮಾಣದಲ್ಲಿ ಸಾಲ ನೀಡಲು ಸಹಕರಿಸುತ್ತಿಲ್ಲ. ಹೀಗಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ ಎಂಬ ಸಂಗತಿ ಗಮನಕ್ಕೆ ಬಂದಿದೆ’ ಎಂದರು.

‘ಗೋ ಸುರಕ್ಷಾ ಯೋಜನೆಯಡಿ ಶೇ 75ರಷ್ಟು ವಿಮಾ ಕಂತನ್ನು ಒಕ್ಕೂಟಗಳ ಮೂಲಕ ಪಾವತಿಸಿ ಉಳಿದ ಶೇ 25ರಷ್ಟು ಫಲಾನುಭವಿಗಳಿಂದ ಪಡೆದು ₹ 50ಸಾವಿರವರೆಗೆ ವರ್ಷದ ವಿಮೆ ಸೌಲಭ್ಯ ಮಾಡಿಸಲಾಗುತ್ತಿದೆ. ಇದರ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು’ ಎಂದು ಕೋರಿದರು.

ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲು ಪಾಟೀಲ, ಉದಯಸಿಂಗ ಶಿಂಧೆ, ಸವಿತಾ ಖಾನಪ್ಪನವರ ಮತ್ತು ರಾಮಣ್ಣ ಬಂಡಿ, ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್, ವ್ಯವಸ್ಥಾಪಕ ಡಾ.ಜೆ.ಆರ್. ಮನ್ನೇರಿ, ಉಪ ವ್ಯವಸ್ಥಾಪಕ ಡಾ.ಎಂ.ವಿ. ಲಕ್ಕನ್ನವರ ಇದ್ದರು.

ಗೋಕಾಕ ವಿಸ್ತರಣಾಧಿಕಾರಿ ಕರಬನ್ನವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT