ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಮ್ಲಜನಕ ಪೂರೈಸದಿದ್ದರೆ ಆಸ್ಪತ್ರೆ ಮುಚ್ಚಬೇಕಾಗುತ್ತೆ’

ಖಾಸಗಿ ಆಸ್ಪತ್ರೆಗಳ ವೈದ್ಯರ ಎಚ್ಚರಿಕೆ
Last Updated 4 ಮೇ 2021, 13:22 IST
ಅಕ್ಷರ ಗಾತ್ರ

ಬೆಳಗಾವಿ: ‘ವೈದ್ಯಕೀಯ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ಪೂರೈಕೆ ಆಗದಿದ್ದರೆ ಆಸ್ಪತ್ರೆಗಳನ್ನು ಮುಚ್ಚಿ ಮನೆಗೆ ಹೋಗಬೇಕಾಗುತ್ತದೆ’ ಎಂದು ಖಾಸಗಿ ಅಸ್ಪತ್ರೆಗಳ ಕೆಲವು ವೈದ್ಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ಸುಭಾಷ್ ಪಾಟೀಲ, ‘ನಗರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಆಸ್ಪತ್ರೆಗಳನ್ನು ನಡೆಸುವುದು ಬಹಳ ಕಷ್ಟವಾಗಿದೆ. 1ನೇ ಅಲೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕ ಸಿಕ್ಕರೂ ಗುಣಮುಖರಾಗುತ್ತಿದ್ದರು. ಆದರೆ, ಈ ಬಾರಿ ಆಮ್ಲಜನಕ ಬೇಡಿಕೆಯು ಜಾಸ್ತಿಯಾಗಿದೆ’ ಎಂದರು.

‘ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕು ಎಂದು ಜಿಲ್ಲಾಡಳಿತ ಹೇಳಿದೆ. ಕುಟುಂಬ ಬಿಟ್ಟು ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ನಮ್ಮ ನಿರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸಹಕಾರ ಸಿಗುತ್ತಿಲ್ಲ. ಆಮ್ಲಜನಕ 30 ಸಿಲಿಂಡರ್‌ಗಳನ್ನು ಕೇಳಿದರೆ, 10 ಕೊಟ್ಟು ಹೊಂದಾಣಿಕೆ ಮಾಡಿಕೊಳ್ಳಿ ಎನ್ನುತ್ತಾರೆ. ಪರಿಸ್ಥಿತಿ ಗಂಭೀರವಾಗಿದ್ದು, ರೋಗಿಗಳು ಸಾಯುತ್ತಾರೆ ಎಂದು ಹೇಳಿದರೂ ಹೇಗೋ ನಿರ್ವಹಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. ಆಮ್ಲಜನಕ ಹಾಗೂ ರೆಮ್‌ಡಿಸಿವಿರ್ ಪೂರೈಸಿದರೆ ದಾಖಲಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಸೋಮವಾರ ಹಾಗೂ ಮಂಗಳವಾರ ಆಮ್ಲಜನಕ ಕೊರತೆಯಿಂದ ಗರಿಷ್ಠ ಸಾವುಗಳಾಗಿವೆ. ಸಾವಿನ ಪ್ರಮಾಣ ಹೇಳಿಕೊಳ್ಳುವುದಕ್ಕೂ ಆಗದಷ್ಟು ಪರಿಸ್ಥಿತಿ ಇದೆ. ಆಮ್ಲಜನಕ, ರೆಮ್‌ಡಿಸಿವರ್‌ ಕೊರತೆ ಇಲ್ಲ ಎಂದು ಹೇಳುವಂತೆ ಸಭೆಯಲ್ಲಿ ತಿಳಿಸುತ್ತಾರೆ. ಅರ್ಜಿ ಸಲ್ಲಿಸಿದರೂ ತಕ್ಕಂತೆ ರೆಮ್‌ಡಿಸಿವಿರ್‌ ಸಿಗುತ್ತಿಲ್ಲ. ಇನ್ನೆರಡು ದಿನ ನೋಡುತ್ತೇವೆ. ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗೇ ಕೀಲಿ ಕೊಡುತ್ತೇವೆ’ ಎಂದು ಹೇಳಿದರು.

‘ಇಲ್ಲಿ ಆಮ್ಲಜನಕ ಹಾಸಿಗೆ ಕೊರತೆ ಬಹಳ ಇದೆ. ನಿತ್ಯ 200ರಿಂದ 300ಕ್ಕೂ ಹೆಚ್ಚು ಕರೆಗಳು ಬರುತ್ತವೆ. ಆಮ್ಲಜನಕವೇ ಇಲ್ಲವೆಂದರೆ ದಾಖಲಿಸಿಕೊಳ್ಳುವುದು ಹೇಗೆ? ರೋಗಿಯೊಬ್ಬರು ಒಂದೂವರೆ ತಾಸು ನಿಂತರೂ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮೃತರಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಡಾ.ಅಮಿತ್ ಬಾತೆ ಮಾತನಾಡಿ, ‘ಬಹುತೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ತೀವ್ರವಾಗಿದೆ. ಮೊದಲನೇ ಅಲೆಯಲ್ಲಿ ಹೆಚ್ಚಿನ ಪೂರೈಕೆ ಇರುತ್ತಿತ್ತು. ಆಗ, ಗುಣಪಡಿಸುವುದು ಸುಲಭ ಇರುತ್ತಿತ್ತು. ಆದರೆ, ಈಗ ಕೋವಿಡ್ ಸ್ವರೂಪ ತೀವ್ರವಾಗಿದೆ. ಯುವಕರಿಗೆ ಮತ್ತು ಮಕ್ಕಳಿಗೂ ತಗಲುತ್ತಿದೆ. ಗುಣವಾದವರಿಗೂ ಮತ್ತೆ ಬರುತ್ತಿದೆ. ಅದಕ್ಕೆ ತಕ್ಕಂತೆ ಆಮ್ಲಜನಕ ಹಾಗೂ ಔಷಧಿ ಪೂರೈಕೆ ಇಲ್ಲ. ಗಂಭೀರ ಸ್ವರೂಪದವರನ್ನು ದಾಖಲಿಸಿಕೊಳ್ಳಲು ತಿರಸ್ಕರಿಸುತ್ತಿದ್ದಾರೆ. ಆಮ್ಲಜನಕ ಸಿಲಿಂಡರ್‌ ತಂದರೆ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳುವಂಥ ಸ್ಥಿತಿ ಬಂದಿದೆ. ಹೀಗಾದರೆ, ಆಸ್ಪತ್ರೆ ನಡೆಸುವುದು ಕಷ್ಟಸಾಧ್ಯವಾಗುತ್ತದೆ. 10–15 ದಿನಗಳಲ್ಲಿ ಸಾಂಕ್ರಾಮಿಕ ಮತ್ತಷ್ಟು ವ್ಯಾಪಿಸಲಿದೆ. ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT