ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಕ್ಕೆ ಒಳಪಡಿಸಲು ಆಗ್ರಹ

ಅನುದಾನಿತ ಶಾಲಾ–ಕಾಲೇಜುಗಳ ನೌಕರರ ಧರಣಿ
Last Updated 13 ಡಿಸೆಂಬರ್ 2018, 12:14 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಶಾಲಾ–ಕಾಲೇಜುಗಳಿಗೆ ಅನುದಾನ ನೀಡುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದವರು ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಧರಣಿ ನಡೆಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಖಾಸಗಿ ಶಿಕ್ಷಣಸಂಸ್ಥೆಗಳು ಸರ್ಕಾರದ ಸಹಭಾಗಿತ್ವದಲ್ಲಿ ಶಿಕ್ಷಣ ನೀಡುತ್ತಿವೆ. ಅವುಗಳಿಗೆ ಸ್ವಾತಂತ್ರ್ಯ ನಂತರ ಅನುದಾನ ನೀಡುತ್ತಾ ಬರಲಾಗಿತ್ತು. ಆದರೆ, 1986ರಲ್ಲಿ ನಿಲ್ಲಿಸಲಾಗಿತ್ತು. 2006ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು, ಹೋರಾಟಕ್ಕೆ ಮಣಿದು 1986ರಿಂದ 1993ರವರೆಗೆ ಅನುದಾನ ನೀಡಿದ್ದರು. 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು 1986ರಿಂದ 1993ರವರೆಗೆ ಕನ್ನಡ ಮಾಧ್ಯಮ ಶಾಲಾ–ಕಾಲೇಜುಗಳಿಗೆ ಅನುದಾನ ಕಲ್ಪಿಸಿತ್ತು. ನಂತರ ಬಂದ ಸರ್ಕಾರಗಳು 1995ರ ನಂತರ ಪ್ರಾರಂಭವಾದ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದೇ ಇರುವುದು ಕನ್ನಡ ಭಾಷೆಗೆ ಮಾಡಿದ ಅವಮಾನವಾಗಿದೆ’ ಎಂದು ಆರೋಪಿಸಿದರು.

‘ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿವೆ. ಇಲ್ಲಿನ ಶಿಕ್ಷಕರು 23 ವರ್ಷಗಳಿಂದ ಕನಿಷ್ಟ ಸಂಬಳಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭದ್ರತೆ ಇಲ್ಲದಿರುವುದರಿಂದ, ಅವರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ಈ ಶಾಲೆಗಳು ಉಳಿಯಬೇಕು ಎಂಬ ಕಾರಣಕ್ಕೆ ಶಿಕ್ಷಕರೇ ತಮ್ಮ ಕನಿಷ್ಟ ಸಂಬಳದಲ್ಲಿ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಬೈಸಿಕಲ್ ಮೊದಲಾದ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಶಾಲಾ–ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಮೂಲಕ ಕನ್ನಡ ಭಾಷೆ ಹಾಗೂ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿಯೇ ಈ ಕುರಿತು ನಿರ್ಧಾರ ಮಾಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಸಿ. ಶಿವಪ್ಪ, ಪದಾಧಿಕಾರಿಗಳಾದ ಜಯದೇವ ಗಾಂಧಿ, ಶೀತಲ ಕೆ. ಮಾಲಗಾಂವೆ, ಜಿ. ಕುಳ್ಳೇಗೌಡ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT