ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಈ ಊರಿನ ಹೆಸರೇ ‘ಸೈನಿಕ ಮಲಿಕವಾಡ’; ಪ್ರತಿ ಮನೆಯಲ್ಲೂ ಇದ್ದಾರೆ ಸೈನಿಕ

ಚಂದ್ರಶೇಖರ ಎಸ್. ಚಿನಕೇಕರ
Published 16 ಆಗಸ್ಟ್ 2024, 4:39 IST
Last Updated 16 ಆಗಸ್ಟ್ 2024, 4:39 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲಿಕವಾಡ ಗ್ರಾಮವು ‘ಸೈನಿಕ ಮಲಿಕವಾಡ’ ಎಂದೇ ಹೆಸರಾಗಿದೆ. ಈ ಊರಿನ ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರು ಭಾರತೀಯ ಸೇನೆಯಲ್ಲಿದ್ದಾರೆ.

ಸಿಆರ್‌ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಎಸ್‍ಎಸ್‍ಬಿ ಸೇರಿ ವಾಯುಪಡೆ, ಭೂಸೇನೆ, ನೌಕಾಪಡೆಯಲ್ಲಿ ಇದ್ದಾರೆ. ಏಳು ದಶಕಗಳಿಂದ ಹೀಗೆ ಸೇನೆ ಸೇರಿದವರ ಸಂಖ್ಯೆ ಬಹಳ ದೊಡ್ಡದು. ಈಗಲೂ 150ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿದ್ದಾರೆ.

1965ರಲ್ಲಿ ಭಾರತ–ಚೀನಾ ಯುದ್ಧ, 1971ರಲ್ಲಿ ಭಾರತ– ಬಾಂಗ್ಲಾದೇಶ ಯುದ್ಧ ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧ ಸೇರಿ ಎಲ್ಲ ಸೇನಾ ಕಾರ್ಯಾಚರಣೆಗಳಲ್ಲೂ ಈ ಊರಿನ ಯೋಧರು ಭಾಗಿ ಆಗಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಈ ಒಂದೇ ಊರಿನ 30 ಸೈನಿಕರು ಸೆಣಸಾಡಿದ್ದಾರೆ.

ಹೊಸ ತಲೆಮಾರಿಗೂ ತರಬೇತಿ: ಗ್ರಾಮದ 300ಕ್ಕೂ ಹೆಚ್ಚು ನಿವೃತ್ತ ಸೈನಿಕರು ಸೇರಿ 2018ರಲ್ಲಿ ಜೈ ಹಿಂದ್ ಅಸೋಶಿಯೇಷನ್ ಎಂಬ ಸಂಘ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಪ್ರತಿ ದಿನ ಯುವಕರಿಗೆ ಉಚಿತವಾಗಿ ತರಬೇತಿ ನೀಡಿ, ಸೇನೆ ಸೇರಲು ಅಣಿಗೊಳಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಯುವಕರಿಗೆ ತರಬೇತಿ ನೀಡುತ್ತಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿನ 15 ರಿಂದ 20 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗುವುದು ಸಾಮಾನ್ಯವಾಗಿದೆ.

‘ಸೇನೆಯಿಂದ ನಿವೃತ್ತರಾದ ಬಳಿಕವೂ ಗ್ರಾಮದ ಅಭಿವೃದ್ಧಿ, ಸ್ವಚ್ಛತೆಗೆ ಶ್ರಮಿಸಬೇಕು ಎಂಬ ನಿಯಮವನ್ನೂ ಈ ಸಂಘ  ಮಾಡಿದೆ. ಹೀಗಾಗಿ, ಇಲ್ಲಿ ನಿರಂತರ ಶ್ರಮದಾನ ಇರುತ್ತದೆ. ನಿವೃತ್ತರು ನಿಧನರಾದರೆ ಸಂಸ್ಥೆ ವತಿಯಿಂದ ಸೇನಾ ವಿಧಾನದಂತೆ ಅಂತ್ಯಕ್ರಿಯೆ ಮಾಡುತ್ತಾರೆ. ವೀರ ಮರಣವನ್ನಪ್ಪಿದವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

₹15 ಲಕ್ಷ ದೇಣಿಗೆ ಸಂಗ್ರಹಿಸಿ ಗ್ರಾಮದಲ್ಲಿ ಬೃಹತ್ ದ್ವಾರ ನಿರ್ಮಿಸಲಾಗಿದ್ದು, ಅದರ ಮೇಲೆ ದೇಶಾಭಿಮಾನದ ಬರಹ ಹಾಗೂ ಚಿತ್ರಗಳನ್ನು ಬಿಡಿಸಲಾಗಿದೆ.

ಹಸೆಮಣೆಯಿಂದ ಯುದ್ಧಕ್ಕೆ

1999ರಲ್ಲಿ ಪುಲ್ವಾಮಾ ದಾಳಿ ಸಂದರ್ಭದಲ್ಲಿ ಮಲಿಕವಾಡದ ಯೋಧ ರಾಜೇಂದ್ರ ಸುತಾರ ಅವರ ಮದುವೆ ನಡೆಯುತ್ತಿತ್ತು. ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ಕರೆಬಂತು. ರಾಜೇಂದ್ರ ಅವರು ಮದುವೆ ಮಂಟಪದಿಂದ ನೇರವಾಗಿ ರಣಾಂಗಣಕ್ಕೆ ತೆರಳಿದ್ದರು.

ಮಲಿಕವಾಡದಲ್ಲಿ ಸೇನೆಗೆ ಸಂಬಂಧಿಸಿದ ಗ್ರಂಥಾಲಯ ಸೈನಿಕ ಭವನ ಹೊರಾಂಗಣ ನಿರ್ಮಿಸಬೇಕು. ಹೆಚ್ಚಿನ ಯುವಜನರಿಗೆ ತರಬೇತಿ ನೀಡಬೇಕು ಎಂಬ ಉದ್ದೇಶವಿದೆ.
–ರಾಜೇಂದ್ರ ಸುತಾರ ಯೋಧ ಮಲಿಕವಾಡ
ರಾಜ್ಯದಲ್ಲಿ ಮಲಿಕವಾಡ ಎಂಬ ಒಂದೇ ಗ್ರಾಮದಿಂದ ಇಷ್ಟೊಂದು ಜನ ಸೇನೆ ಸೇರಿದ್ದು ಅಪರೂಪ. ಪ್ರತಿ ದಾಖಲೆಗಳಲ್ಲಿ ಗ್ರಾಮದ ಹೆಸರು ಸೈನಿಕ ಮಲಿಕವಾಡ ಎಂದಾಗಬೇಕು.
–ಪಾಂಡುರಂಗ ಪಾಟೀಲ ನಿವೃತ್ತ ಯೋಧ ಮಲಿಕವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT