ಮಂಗಳವಾರ, ನವೆಂಬರ್ 19, 2019
23 °C

ಅಂಬೇಡ್ಕರ್‌ ನಿವಾಸ ಯೋಜನೆಯಡಿ ಅವ್ಯವಹಾರ– ಆರೋಪ

Published:
Updated:

ಬೆಳಗಾವಿ: ‘ಗೋಕಾಕ ತಾಲ್ಲೂಕಿನ ಬೆನಚಿನಮರಡಿ(ಕೊ) ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಡಿ ಭಾರಿ ಅವ್ಯವಹಾರ ನಡೆದಿದೆ. ಇದರಲ್ಲಿ ಭಾಗಿಯಾಗಿರುವ ಪಿಡಿಒ, ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು’ ಎಂದು ವಕೀಲ, ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರು ಸಲ್ಲಿಸಿರುವ ಅವರು, ‘2016–17 ಹಾಗೂ 2017–18ನೇ ಸಾಲಿನಲ್ಲಿ ಅನುಕ್ರಮವಾಗಿ 77 ಹಾಗೂ 67 ಸೇರಿದಂತೆ ಒಟ್ಟು 144 ಮನೆಗಳು ಮಂಜೂರಾಗಿದ್ದವು. ₹ 2.44 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಈ ಹಣವನ್ನು ಬೇರೆ ಜಾತಿಯವರಿಗೆ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ನಿಯಮದಂತೆ ಪರಿಶಿಷ್ಟ ಜಾತಿಯ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕು ಹಾಗೂ ಅವರ ಬ್ಯಾಂಕ್‌ ಖಾತೆಗಳಿಗೆ ಮಾತ್ರ ಅನುದಾನ ವರ್ಗಾಯಿಸಬೇಕು. ಆದರೆ, ಇಲ್ಲಿ ನಿಯಮ ಉಲ್ಲಂಘಿಸಿ, ಇತರ ಜಾತಿಯವರಿಗೆ ಹಣ ವರ್ಗಾಯಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ’ ಎಂದು ಹೇಳಿದ್ದಾರೆ.

‘ಇದರ ಹಿಂದೆ ಬಹಳ ದೊಡ್ಡ ಜಾಲವಿದ್ದಂತೆ ಇದೆ. ಈ ಪ್ರಕರಣವನ್ನು ಒಂದು ಗ್ರಾಮಕ್ಕೆ ಸೀಮಿತಗೊಳಿಸಿ ತನಿಖೆ ಕೈಗೊಳ್ಳದೇ ಇಡೀ ಜಿಲ್ಲೆಯಲ್ಲಿ ತನಿಖೆ ಕೈಗೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)