ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 'ಶಕ್ತಿ' ಯೋಜನೆಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ

ಮಹಿಳಾ ಸಬಲೀಕರಣಕ್ಕೆ 'ಶಕ್ತಿ' ಆಸರೆ'
Published 11 ಜೂನ್ 2023, 8:49 IST
Last Updated 11 ಜೂನ್ 2023, 8:49 IST
ಅಕ್ಷರ ಗಾತ್ರ

ಬೆಳಗಾವಿ: 'ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿ ಮುಂತಾದ ಉದ್ದೇಶಗಳಿಗೆ 'ಶಕ್ತಿ' ಯೋಜನೆ ಬಳಸಿಕೊಳ್ಳಬೇಕು' ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ವತಿಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯಾಗಿರುವ "ಶಕ್ತಿ" ಯೋಜನೆಗೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

'ಬಸ್ ಉಚಿತವಿದೆ ಎಂದು ಬಳಸಿಕೊಳ್ಳುವುದಲ್ಲ. ಸದುದ್ದೇಶಕ್ಕೆ ಬಳಕೆಯಾಗಬೇಕು. ಇದರಿಂದ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚು ಬೆಳವಣಿಗೆ ಆಗುತ್ತವೆ. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗಳಿಗೆ ಪುನಶ್ಚೇತನ ಸಿಗಲಿದೆ. ಮಹಿಳೆಯರ ಪ್ರಯಾಣದ ದರವನ್ನು ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ಭರಿಸಲಿದೆ. ಸಂಸ್ಥೆಯಲ್ಲಿ ಉದ್ಯೋಗಗಳ ಹೆಚ್ಚಲಿವೆ' ಎಂದರು.

'ಉಚಿತ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿಗಳಿಂದ ಸರ್ಕಾರಕ್ಕೆ ₹60 ಸಾವಿರ ಕೋಟಿ ಹೊರೆಯಾಗಲಿದೆ. ಆದರೆ, ಮಹಿಳೆಯರ ಓಡಾಟದಿಂದ ವ್ಯಾವಹಾರಿಕ ಚಟುವಟಿಕೆಗಳು ಹೆಚ್ಚಲಿವೆ. ಪರೋಕ್ಷವಾಗಿ ತೆರಿಗೆ ಹೆಚ್ಚು ಸಂಗ್ರಹವಾಗಲಿದೆ' ಎಂದರು.

'ಈ ದಿನ ರಾಜ್ಯದ ಇತಿಹಾಸದಲ್ಲಿ ಮೈಲಿಗಲ್ಲು. ಈ ಯೋಜನೆಯು ದೇಶಕ್ಕೆ ಮಾದರಿಯಾಗಲಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯ ಪರ-ವಿರೋಧ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಎಲ್ಲವನ್ನೂ ನಾವು ಸವಾಲಾಗಿ ಸ್ವೀಕರಿಸಿದ್ದೇವೆ' ಎಂದೂ ಹೇಳಿದರು.

'ಗ್ಯಾರಂಟಿ ಅನುಷ್ಠಾನದಿಂದ ಸರ್ಕಾರಕ್ಕೆ ಹೊರೆಯಾದರೂ ಪ್ರವಾಸೋದ್ಯಮ ಪ್ರಗತಿಯಾಗುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಯಾಗಲಿದೆ.

ಗ್ಯಾರಂಟಿ ಮಾತ್ರವಲ್ಲದೇ ಸರ್ಕಾರ ನೀಡಿರುವ ಉಳಿದ ಭರವಸೆಗಳನ್ನು ಕೂಡ‌ ಹಂತ ಹಂತವಾಗಿ ಈಡೇರಿಸಲಿದೆ' ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, 'ಇಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ₹265 ಕೋಟಿ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗ ಉಚಿತ ಪ್ರಯಾಣದ ಮೂಲಕ ಮಹಿಳೆಯರ ಸ್ವಾವಲಂಬನೆಗೆ ಮುಂದಾಗಿದೆ' ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಆಸಿಫ್ (ರಾಜು) ಸೇಠ್ ಮಾತನಾಡಿ, 'ಮಹಿಳೆಯರು ಮಾತ್ರ ಬಸ್ ನಲ್ಲಿ ಪ್ರಯಾಣಿಸುವುದಿಲ್ಲ. ಇಡೀ ಕುಟುಂಬವೇ ಪ್ರಯಾಣ ಮಾಡುವುದರಿಂದ ಸಾರಿಗೆ ಸಂಸ್ಥೆಗೆ ಪರೋಕ್ಷವಾಗಿ ಆದಾಯ ಕೂಡ ಬರಬಹುದು. ವ್ಯವಹಾರ ಹೆಚ್ಚಾದಂತೆ ನಷ್ಟದ ಬದಲು ಒಟ್ಟಾರೆ ಲಾಭದ ಪ್ರಮಾಣ ಹೆಚ್ಚಾಗಬಹುದು. 7 ಸಾವಿರದಿಂದ 8 ಸಾವಿರ ಚಾಲಕರು, ಕಂಡಕ್ಟರುಗಳ ನೇಮಕಾತಿ ಮಾಡಬೇಕಾಗಬಹುದು. ಈಗ ಶೇ 35ರಷ್ಟು ಮಹಿಳೆಯರು ದಿನವೂ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ 50ಕ್ಕೆ ಏರಲಿದೆ' ಎಂದು ಅವರು ವಿಶ್ಲೇಷಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೇಣುಗೋಪಾಲ್, ಕಾಂಗ್ರೆಸ್ ಮುಖಂಡರೂ ವೇದಿಕೆ ಮೇಲಿದ್ದರು.

ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಸ್ವಾಗತಿಸಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಚಾಲನೆ :

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಅಲಂಕೃತ ಬಸ್ ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣದ "ಶಕ್ತಿ" ಯೋಜನೆಗೆ ಚಾಲನೆ ನೀಡಿದರು.

ಮಹಿಳೆಯರಿಂದ ತುಂಬಿದ ನಗರ ಸಾರಿಗೆ ಸಂಸ್ಥೆಯ ಬಸ್ ಗಳು ಸಾಂಕೇತಿಕವಾಗಿ ಬೆಳಗಾವಿಯಿಂದ ವಡಗಾವಿಯವರೆಗೆ ಪ್ರಯಾಣ ಬೆಳೆಸಿದವು. ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಕೂಡ ಬಸ್ ಪ್ರಯಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT