ಬುಧವಾರ, ನವೆಂಬರ್ 13, 2019
17 °C

ಕತ್ತಿ, ಕಾಗೆ ಅಸಮಾಧಾನಗೊಂಡಿಲ್ಲ; ಬಿಎಸ್‌ವೈ

Published:
Updated:

ಬೆಳಗಾವಿ: ‘ಪಕ್ಷದ ಮುಖಂಡರಾದ ರಾಜು ಕಾಗೆ ಹಾಗೂ ಉಮೇಶ ಕತ್ತಿ ಅವರಿಗೆ ಯಾವುದೇ ರೀತಿಯ ಅಸಮಾಧಾನವಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇವರಿಬ್ಬರು ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮಾತನಾಡುತ್ತಿದ್ದೇವೆ. ಯಾವುದೇ ರೀತಿಯ ಅಸಮಾಧಾನವಿಲ್ಲ’ ಎಂದರು.

‘ಕಳೆದ ಬಾರಿ ಬೆಳಗಾವಿಗೆ ಬಂದಿದ್ದಾಗ ಅವರ ಮನೆಗೆ ಹೋಗಿ ಮಾತುಕತೆಯಾಡಿದ್ದೆ. ರಾಜು ಕಾಗೆ ಹಾಗೂ ಅಶೋಕ ಪೂಜಾರಿ ಜೊತೆಯೂ ಮಾತನಾಡಿದ್ದೇನೆ. ಯಾರಿಗೂ ಅಸಮಾಧಾನ ಇಲ್ಲ’ ಎಂದು ತಿಳಿಸಿದರು.

ಯಡಿಯೂರಪ್ಪ ಅವರ ಕೈಗಳನ್ನು ಕಟ್ಟಿಹಾಕುವ ಪ್ರಯತ್ನ ಪಕ್ಷದಲ್ಲಿ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇಂತಹ ಹೇಳಿಕೆ ನೀಡದಂತೆ ಅವರಿಗೆ ಸೂಚಿಸಿದ್ದೇನೆ’ ಎಂದರು.

ಸದ್ಯದಲ್ಲಿಯೇ ಪ್ರಕಟ: ‘ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಆಯ್ಕೆಯನ್ನು ಇದೇ ತಿಂಗಳ 24, 25ರ ನಂತರ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ ಮುಕ್ತ ಭಾರತ ಸನಿಹ: ‘ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಮುಕ್ತ ಭಾರತ ನಿಜವಾಗುವ ಕಾಲ ಸನ್ನಿಹದಲ್ಲಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)