ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು | ನೀರಾವರಿ ಜೋಳ:‌ ಬಂಪರ್ ಕಾಳು

ಹಿಂಗಾರಿ ಬೆಳೆಯಲ್ಲಿ ಮೇಟ್ಯಾಲದ ಕೃಷಿಕ ಶಿವಾನಂದ ಸಾಧನೆ
Published 2 ಫೆಬ್ರುವರಿ 2024, 4:44 IST
Last Updated 2 ಫೆಬ್ರುವರಿ 2024, 4:44 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮೇಟ್ಯಾಲ್ ಗ್ರಾಮದ ಪ್ರಗತಿಪರ ಕೃಷಿಕ ಶಿವಾನಂದ ಸಿದ್ದಪ್ಪ ಅಗಸಿಮನಿ ಬಿತ್ತನೆ ಮಾಡಿರುವ ಹೈಬ್ರಿಡ್ ತಳಿಯ ಜೋಳ ತೆನೆಗಟ್ಟಿದ್ದು, ಸಹಸ್ರಾರು ಕಾಳುಗಳನ್ನು ಒಳಗೊಂಡಿರುವುದು ವಿಶೇಷವಾಗಿದೆ.

ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಕಂಗೆಡದ ಅವರು, ಹಿಂಗಾರಿನಲ್ಲಿ ವಾತಾವರಣ ಆಶ್ರಯಿಸಿ ಬರುವ ‘ಹವಾಜೋಳ’ ಬೀಜ ಬಿತ್ತನೆ ಮಾಡಲಿಲ್ಲ. ಬದಲಿಗೆ ನೀರಾವರಿ ಮೇಲೆ ಅವಲಂಬಿಸಿರುವ ಜೋಳದ ತಳಿ ಖರೀದಿಸಿ ಬಿತ್ತನೆ ಮಾಡಿದರು. ಅವರ ನಿರೀಕ್ಷೆಯೂ ಹುಸಿಯಾಗಲಿಲ್ಲ. ಹೆಚ್ಚಿನ ಇಳುವರಿಯ ಕನಸೂ ತೆನೆಗಟ್ಟಿ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಟ್ರ್ಯಾಕ್ಟರ್ ಮೂಲಕ ಹದ: ‘ಕುಟುಂಬದ ಬೇರೆ ಬೇರೆ ಕಡೆಗಳಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ನೀರಾವರಿ ಆಶ್ರಿತ ಜೋಳ ಬಿತ್ತನೆ ಮಾಡಲಾಗಿದೆ. ನಾಲ್ಕೂ ಕಡೆಗಳಲ್ಲಿ ನಿರೀಕ್ಷೆಗೂ ಮೀರಿ ಬೆಳೆ ಬಂದಿದೆ’ ಎನ್ನುತ್ತಾರೆ ಶಿವಾನಂದ.

‘ಮೊದಲು ಟ್ರ್ಯಾಕ್ಟರ್‌ ಮೂಲಕ ಭೂಮಿ ಹದ ಮಾಡಿಕೊಳ್ಳಲಾಯಿತು. ಸಾಲಿನಲ್ಲಿ ಕಾಳು ಕೈಯಲ್ಲಿ ಹಿಡಿದು ಉದುರಿಸದೆ, ಕೂರ್ಗಿಯ ಮೂಲಕ ಬಿತ್ತನೆ ಮಾಡಲಾಯಿತು. ಬಿತ್ತುವ ಸಮಯದಲ್ಲಿ ಡಿಎಪಿ ರಸಗೊಬ್ಬರ ಉಪಯೋಗಿಸಲಾಯಿತು’ ಎಂದು ಬಿತ್ತನೆಯ ಪ್ರಾಥಮಿಕ ಹಂತದ ವಿವರ ನೀಡುತ್ತಾರೆ ಅವರು.

‘ಎಕರೆಗೆ ಒಂದು ಪ್ಯಾಕೆಟ್‌ ಅಂದರೆ, ಮೂರು ಕೆಜಿ ಜೋಳ ಬೇಕಾಗುತ್ತದೆ. ಈಗಾಗಲೇ ಮೂರು ಬಾರಿ ಕೊಳವೆಬಾವಿಯಿಂದ ನೀರು ಹಾಯಿಸಲಾಗಿದೆ. ಕನಿಷ್ಠ 110 ರಿಂದ 120 ದಿನಗಳಿಗೆ ಫಸಲು ಕೈಸೇರುತ್ತದೆ. ಬಿತ್ತನೆ ಮಾಡಿ ಈಗ 90 ದಿನಗಳಾಗಿವೆ’ ಎಂದು ಮಾಹಿತಿ ನೀಡಿದರು.

ಬೃಹತ್ ತೆನೆ: ‘ನೀರಾವರಿ ಆಶ್ರಿತ ಜೋಳವಾಗಿದ್ದರಿಂದ ಸಕಾಲಕ್ಕೆ ತಕ್ಕಂತೆ ಬೆಳೆ ಆರೈಕೆ ಮಾಡಿದ್ದರಿಂದ ಬೃಹತ್‌ ತೆನೆಗಟ್ಟಲು ಕಾರಣವಾಗಿದೆ. ತೆನೆಯೊಂದರಲ್ಲಿ ಸುಮಾರು 9 ಸಾವಿರಕ್ಕಿಂತ ಹೆಚ್ಚು ಕಾಳುಗಳಿವೆ’ ಎನ್ನುತ್ತಾರೆ ಶಿವಾನಂದ.

‘ನೀರಾವರಿ ಅವಲಂಬಿತ ಜೋಳದ ಫಸಲಿಗೆ ಈ ಬಾರಿ ಉತ್ತಮ ವಾತಾವರಣವಿದೆ. ಕೊಳವೆಬಾವಿ ಅಥವಾ ನದಿ ನೀರು ಹಾಯಿಸಿ ಬೆಳೆದ ಜೋಳ ಎಲ್ಲೆಡೆ ಸಮೃದ್ಧವಾಗಿ ಬೆಳೆದಿರುವುದು ಕಾಣುತ್ತಿದೆ’ ಎಂದರು.

‘ರೈತರು ಹೆಚ್ಚಾಗಿ ಕಬ್ಬಿನ ಬೆಳೆಗೆ ಮೊರೆ ಹೋಗುತ್ತಿದ್ದಾರೆ. ಮಳೆ ಕೊರತೆ ಕಾಡಿದರೆ, ಎಕರೆಗೆ 10ರಿಂದ 15 ಟನ್ ಇಳುವರಿ ಬರುವುದು ಕಠಿಣವಾಗುತ್ತಿದೆ. ಆದರೆ, ಈಗ ಬಿತ್ತಿದ ಜೋಳ ಎಕರೆಗೆ 25 ಚೀಲ ಇಳುವರಿ ಬರುವ ನಿರೀಕ್ಷೆಯಿದೆ. ಕನಿಷ್ಠ ಕ್ವಿಂಟಲ್‌ಗೆ ₹4 ಸಾವಿರಕ್ಕೆ ಮಾರಾಟವಾದರೂ, ಎಕರೆಗೆ ₹1 ಲಕ್ಷ ಆದಾಯ ದಾಟುತ್ತದೆ. ಜತೆಗೆ ರೈತನ ಒಡನಾಡಿಗಳಾಗಿರುವ ಜಾನುವಾರುಗಳಿಗೆ ಮೇವು ಕೂಡಾ ಆಗುತ್ತದೆ’ ಎಂದು ಹೇಳಿದರು. ಮಾಹಿತಿಗೆ ಮೊ.ಸಂ.9844994937 ಸಂಪರ್ಕಿಸಬಹುದು.

ಹೊಲ ಹದ ಮಾಡುವ ಕ್ರಮ ಬಿತ್ತನೆಯಲ್ಲಿ ಅಳವಡಿಸಿಕೊಳ್ಳುವ ಒದ್ಬಿತ್ತನೆಯಲ್ಲಿ ಅಳವಡಿಸಿಕೊಳ್ಳುವ ಪದ್ಧತಿ ಬೆಳೆ ಆರೈಕೆ ವಿಧಾನದಿಂದ ಅಧಿಕ ಪ್ರಮಾಣ ಇಳುವರಿ ಪಡೆಯಲು ಸಾಧ್ಯವಿದೆ

-ಶಿವಾನಂದ ಅಗಸಿಮನಿ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT