ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿಯ ಆಶ್ರಯನಗರ, ರಾಮನಗರದ ಸ್ಥಿತಿ- ಇಲ್ಲಿ ಮೂಲ ಸೌಕರ್ಯಗಳ ಕೊರತೆ

ಚಿಕ್ಕೋಡಿಯ ಆಶ್ರಯನಗರ, ರಾಮನಗರದ ಸ್ಥಿತಿ
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ): ಪಟ್ಟಣದ ಹೊರ ವಲಯದಲ್ಲಿರುವ ಆಶ್ರಯನಗರ ಮತ್ತು ರಾಮನಗರಗಳಲ್ಲಿ ಚರಂಡಿ, ರಸ್ತೆ ಮೊದಲಾದ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ಸರ್ಕಾರ ವಸತಿರಹಿತರಿಗಾಗಿ ಒಂದೂವರೆ ದಶಕದ ಹಿಂದೆ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿದೆ. ಅಂತಹ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೌಕರ ವರ್ಗದವರೂ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು, 2ಸಾವಿರ ಜನಸಂಖ್ಯೆ ಇದೆ.

ಆಶ್ರಯ ನಗರ ಮತ್ತು ರಾಮನಗರಗಳ ಕೆಲವೆಡೆ ಚರಂಡಿ, ರಸ್ತೆ, ರಸ್ತೆಗೆ ಫೆವರ್ ಬ್ಲಾಕ್ ಅಳವಡಿಸಿಲಾಗಿದೆ. ಆದರೆ, ಪಟ್ಟಣದಿಂದ ಆಶ್ರಯನಗರ ಪ್ರವೇಶಿಸುವ ಪ್ರಾರಂಭದಲ್ಲೇ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಯೂ ಇಲ್ಲ. ಇದರಿಂದಾಗಿ ಮಳೆ ನೀರು, ಬಟ್ಟೆ, ಪಾತ್ರೆಗಳನ್ನು ತೊಳೆದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಅನೈರ್ಮಲ್ಯ ಉಂಟಾಗುತ್ತಿದೆ. ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗುತ್ತಿದೆ. ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ. ಚರಂಡಿ ಇಲ್ಲದ ಕಾರಣ, ಮಳೆಗಾಲದಲ್ಲಿ ಕೆಲವು ಮನೆಗಳಿಗೂ ಮಳೆ ನೀರು ನುಗ್ಗುತ್ತಿದೆ ಎಂಬುದು ನಿವಾಸಿಗಳ ಅಳಲು.

ರಾಮನಗರದಲ್ಲಿ ವಿದ್ಯಾರ್ಥಿಗಳ ವಸತಿನಿಲಯದ ಬಳಿ ನೂರಾರು ಮನೆಗಳಿದ್ದು, ಅಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಇಲ್ಲ. ಸಮರ್ಪಕವಾದ ರಸ್ತೆಯೂ ಇಲ್ಲ. ವಿಶೇಷವಾಗಿ ಅವಳಿ ನಗರದಲ್ಲಿ ನೂರಾರು ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯವೂ ನಡೆದಿಲ್ಲ. ಸಂಬಂಧಿಸಿದ ಅಧಿಕಾರಿಗಳ ಎದುರು ಬೇಡಿಕೆಯನ್ನೂ ಸಲ್ಲಿಸಲಾಗಿದೆ. ಆದರೂ, ಪ್ರಯೋಜನ ಆಗುತ್ತಿಲ್ಲ ಎಂದು ನಿವಾಸಿಗಳು ತಿಳಿಸುತ್ತಾರೆ.

ಕೆಲವು ಮನೆಗಳ ಅಂಗಳಗಳಲ್ಲೇ ವಿದ್ಯುತ್ ಕಂಬಗಳಿವೆ. ಇನ್ನು ಕೆಲವು ಮನೆಗಳ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿವೆ. ಇಕ್ಕಟ್ಟಾಗಿರುವ ಸ್ಥಳಗಳಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಚರಂಡಿ ನಿರ್ಮಿಸಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ.

‘ಈ ನಗರಗಳಲ್ಲಿ ಸಮರ್ಪಕವಾದ ಚರಂಡಿ ಮತ್ತು ರಸ್ತೆ ನಿರ್ಮಾಣ ಆಗಬೇಕು. ಕೆಲವು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಅದನ್ನು ಕುಟುಂಬಗಳಿಗೆ ಕೊಡಿಸಬೇಕು. ಅಪಾಯಕಾರಿಯಾಗುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು’ ಎಂದು ಕೋರುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT