ತಂತ್ರಜ್ಞಾನಕ್ಕೆ ತಕ್ಕ ಸಂಶೋಧನೆ ನಡೆಸಿ

ಮಂಗಳವಾರ, ಜೂನ್ 25, 2019
25 °C
‘ಗ್ರಂಥಾಲಯಗಳಲ್ಲಿ ಅನ್ವೇಷಣೆ’ ಸಮ್ಮೇಳನ ಉದ್ಘಾಟಿಸಿದ ರಾಜ್ಯಪಾಲ

ತಂತ್ರಜ್ಞಾನಕ್ಕೆ ತಕ್ಕ ಸಂಶೋಧನೆ ನಡೆಸಿ

Published:
Updated:
Prajavani

ಬೆಳಗಾವಿ: ‘ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ’ ಎಂದು ರಾಜ್ಯಪಾಲ ವಜೂಭಾಯಿ ಆರ್. ವಾಲಾ ತಿಳಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರಿನ ಎಲ್ಐಎಸ್ ಅಕಾಡೆಮಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಶ್ರಯದಲ್ಲಿ ವಿಟಿಯು ಸಭಾಂಗಣದಲ್ಲಿ ಗುರುವಾರದಿಂದ 3 ದಿನಗಳವರೆಗೆ ಆಯೋಜಿಸಿರುವ ‘ಗ್ರಂಥಾಲಯಗಳಲ್ಲಿ ಅನ್ವೇಷಣೆ’ ಕುರಿತ 2ನೇ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿ ಮಾಹಿತಿಯೂ ಬೆರಳತುದಿಯಲ್ಲಿ ಸಿಗುತ್ತಿದೆ. ಧರ್ಮ ಗ್ರಂಥಗಳೂ ಡಿಜಿಟಲೀಕರಣಗೊಳ್ಳುತ್ತಿವೆ. ತಂತ್ರಜ್ಞಾನದ ಬೆಳವಣಿಗೆ ತಡೆಯುವುದು ಸಾಧ್ಯವಿಲ್ಲ. ಆದ್ದರಿಂದ ತಂತ್ರಜ್ಞಾನಕ್ಕೆ ತಕ್ಕಂತೆ ಗ್ರಂಥಾಲಯ ಕ್ಷೇತ್ರದಲ್ಲಿ ಸಂಶೋಧನೆಗಳಾಗಬೇಕು’ ಎಂದು ಹೇಳಿದರು.

‘ನಮ್ಮಲ್ಲಿ ಜ್ಞಾನ ಹಾಗೂ ಬೌದ್ಧಿಕ ಶಕ್ತಿಯಿದೆ. ಸೂಕ್ತ ಅವಕಾಶ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಜ್ಞಾನದ ಹರಿವು ಹೆಚ್ಚಾಗುತ್ತಿದ್ದು, ಜ್ಞಾನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ಸಾಧನ ಇನ್ನೂ ನಮ್ಮ ಬಳಿ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಐದು ವರ್ಷದ ಮಕ್ಕಳಿಗೂ ಮೊಬೈಲ್ ಬಳಕೆ ಕರಗತವಾಗಿದೆ. ವಿದೇಶದ ಅಭಿವೃದ್ಧಿಗೆ ಕೆಲಸ ಮಾಡುವ ನಮ್ಮ ದೇಶದ ಯುವಜನರ ಬುದ್ಧಿಶಕ್ತಿಯನ್ನು ನಮ್ಮ ದೇಶದ ಪ್ರಗತಿಗೆ ಬಳಸಿಕೊಳ್ಳುವ ಅಗತ್ಯವಿದೆ’ ಎಂದರು.

‘ಗ್ರಂಥಾಲಯಗಳನ್ನು ಸಶಕ್ತೀಕರಣಗೊಳಿಸುವುದು, ನೂತನ ಅನ್ವೇಷಣೆ ಮಾಡುವುದು ಸಮ್ಮೇಳನದ ಆಶಯವಾಗಿದೆ. ಗ್ರಂಥಾಲಯ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನೆ ಕೈಗೊಳ್ಳುವ ಮೂಲಕ ದೇಶದ ಕೀರ್ತಿ ಹೆಚ್ಚಿಸಬೇಕು’ ಎಂದು ತಿಳಿಸಿದರು.

ಆಶಯ ಭಾಷಣ ಮಾಡಿದ ಧಾರವಾಡ ಐಐಟಿ ನಿರ್ದೇಶಕ ಕವಿ ಮಹೇಶ್, ‘ತಂತ್ರಜ್ಞಾನದ ಬೆಳವಣಿಗೆ ದೈನಂದಿನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ. ಇಂಥ ಸನ್ನಿವೇಶದಲ್ಲಿ ಗ್ರಂಥಾಲಯ ಯಾವ ರೀತಿಯ ಸವಾಲು ಎದುರಿಸಬೇಕಿದೆ ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ’ ಎಂದರು.

‘ಎಂ-ಲೈಬ್ರರಿ’ ಮೊಬೈಲ್ ಆ್ಯಪ್ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಜೀವನಸಾಧನೆಯನ್ನು ಗುರುತಿಸಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ.ಎಸ್.ಎಸ್. ಹೊಸಮನಿ ಅವರನ್ನು ರಾಜ್ಯಪಾಲರು ಸನ್ಮಾನಿಸಿದರು.

ಬೆಂಗಳೂರಿನ ಎಲ್.ಐ.ಎಸ್. ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ. ಕೊಣ್ಣೂರ ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ವಿಟಿಯು ಹಣಕಾಸು ಅಧಿಕಾರಿ ಸ್ವಪ್ನಾ, ವಿಟಿಯು ಗ್ರಂಥಪಾಲಕ ಕೆ.ಆರ್. ಮುಲ್ಲಾ ಇದ್ದರು.

ಕುಲಸಚಿವ ಡಾ.ಸತೀಶ್ ಅಣ್ಣಿಗೇರಿ ವಂದಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !